ಕೋಲಾರದ ಮಾಲೂರಿನಲ್ಲಿ ಭಾರತ್ ಬಯೋಟೆಕ್ ಕಂಪನಿಯ ಕೊವ್ಯಾಕ್ಸಿನ್ ಲಸಿಕೆ ತಯಾರಿಕೆ ಘಟಕ ಆರಂಭವಾಗಲಿದೆ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದ್ದಾರೆ.
ರಾಜ್ಯ ಕೋವಿಡ್ ಕಾರ್ಯಪಡೆ ಅಧ್ಯಕ್ಷರಾಗಿರುವ ಅವರು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಬೆಂಗಳೂರಿಗೆ ಸಮೀಪದ ಕೋಲಾರ ಜಿಲ್ಲೆ ಮಾಲೂರಿನಲ್ಲಿ ಭಾರತ್ ಬಯೋಟೆಕ್ ನ ಕೊವ್ಯಾಕ್ಸಿನ್ ಲಸಿಕೆ ತಯಾರಿಕೆ ಘಟಕ ಆರಂಭವಾಗಲಿದೆ. ಈಗಾಗಲೇ ಘಟಕ ಆರಂಭಿಸಲು ಸರ್ಕಾರದಿಂದ ಎಲ್ಲ ಒಪ್ಪಿಗೆ ನೀಡಲಾಗಿದ್ದು, ಆಡಳಿತಾತ್ಮಕ ಕೆಲಸಗಳನ್ನು ಕಂಪನಿ ಪೂರ್ಣಗೊಳಿಸುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ಘಟಕ ಆರಂಭಿಸಲು ಸಿವಿಲ್ ಕಾಮಗಾರಿ ಆರಂಭವಾಗಿದ್ದು, ಆದಷ್ಟು ಶೀಘ್ರವಾಗಿ ಕಾಮಗಾರಿ ಪೂರ್ಣಗೊಳಿಸಿ ಲಸಿಕೆ ತಯಾರಿಕೆ ಆರಂಭಿಸಲಾಗುವುದು ಎಂದು ಹೇಳಿದ್ದಾರೆ. ಯಾವುದೇ ಲಸಿಕೆ ತಯಾರಿಕೆ ಕಂಪನಿ ರಾಜ್ಯದಲ್ಲಿ ಘಟಕ ಆರಂಭಿಸಲು ಇಚ್ಚಿಸಿದಲ್ಲಿ ಅಗತ್ಯ ಸಹಕಾರ ನೀಡಲಾಗುವುದು. ಶೀಘ್ರವೇ ಅನುಮತಿ ಕೊಡಲಾಗುವುದು. ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 100 ಹಾಸಿಗೆಗಳ ಆಸ್ಪತ್ರೆ, ಆಕ್ಸಿಜನ್, ಐಸಿಯು ಬೆಡ್ ಗಳ ವ್ಯವಸ್ಥೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.