
ಧಾರವಾಡ: ಎನ್‍ಇಪಿಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಹೆಚ್ಚಿನ ಉಪನ್ಯಾಸಕರ ಅಗತ್ಯವಿದೆ. ಹೀಗಾಗಿ ಮುಂಬರುವ ವರ್ಷಗಳಲ್ಲಿ ರಾಜ್ಯದಲ್ಲಿ 15 ಸಾವಿರಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರ ಅಗತ್ಯ ಬೀಳುತ್ತದೆ. ಆದ್ದರಿಂದ ಈಗಿರುವ 11 ಸಾವಿರ ಅತಿಥಿ ಉಪನ್ಯಾಸಕರು ಅಭದ್ರತೆಯ ಭಾವನೆ ಒಳಗಾಗುವ ಅಗತ್ಯವಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.
ತಮ್ಮ ಗೌರವಧನವನ್ನು ಗಣನೀಯವಾಗಿ ಹೆಚ್ಚಿಸಲು ಶ್ರಮಿಸಿದ ಸಚಿವರಿಗೆ ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘವು ಬುಧವಾರ ಇಲ್ಲಿ ನೀಡಿದ ಸನ್ಮಾನವನ್ನು ಸ್ವೀಕರಿಸಿ ಅವರು ಮಾತನಾಡಿದರು.
ಈ ಮೊದಲು ಅತಿಥಿ ಉಪನ್ಯಾಸಕರ ಗೌರವಧನಕ್ಕೆ ವರ್ಷಕ್ಕೆ 110 ಕೋಟಿ ರೂ. ಮಾತ್ರ ಮೀಸಲಿಡಲಾಗುತ್ತಿತ್ತು. ಈಗ ಈ ಮೊತ್ತವನ್ನು 280 ಕೋಟಿ ರೂ.ಗಳಿಗೆ ಹೆಚ್ಚಿಸಲಾಗಿದೆ. ಜತೆಗೆ ಆಯಾ ಕಾಲೇಜುಗಳಿಗೆ ಶುಲ್ಕದ ರೂಪದಲ್ಲಿ ಬರುವ ಹಣವನ್ನು ಕಾಲೇಜಿನ ಖಾತೆಗೇ ಹಾಕಲಾಗುತ್ತಿದೆ. ಈಗ ಅತಿಥಿ ಉಪನ್ಯಾಸಕರು ಮುಂದಿಟ್ಟಿರುವ ಇನ್ನೊಂದಿಷ್ಟು ಬೇಡಿಕೆಗಳ ಬಗ್ಗೆ ಕಾನೂನಿನ ಚೌಕಟ್ಟಿನಲ್ಲಿ ಏನು ಮಾಡಬಹುದೆಂದು ಪರಿಶೀಲಿಸಲು ಮುಖ್ಯಮಂತ್ರಿಗಳ ಜತೆ ಚರ್ಚಿಸಲಾಗುವುದು ಎಂದು ಅವರು ತಿಳಿಸಿದರು.
ಅತಿಥಿ ಉಪನ್ಯಾಸಕರಿಗೆ ಈಗ ಸಮಯಕ್ಕೆ ಸರಿಯಾಗಿ ವೇತನ ಕೊಡುವ ವ್ಯವಸ್ಥೆ ಮಾಡಲಾಗಿದ್ದು, ಈ ಸಂಬಂಧವಾಗಿ ಪ್ರಾಂಶುಪಾಲರುಗಳಿಗೆ ಸೂಕ್ತ ಸೂಚನೆಗಳನ್ನು ನೀಡಲಾಗಿದೆ. ನೀವೆಲ್ಲರೂ ಗೌರವದಿಂದ ಬದುಕಬೇಕೆಂಬ ಸದುದ್ದೇಶ ಇದರ ಹಿಂದಿದೆ. ಉನ್ನತ ಶಿಕ್ಷಣ ಇಲಾಖೆಯಲ್ಲಿ 6,500 ಹುದ್ದೆಗಳು ಮಂಜೂರಾಗಿವೆ. ಇವೆಲ್ಲ ತುಂಬಿದರೂ ಅತಿಥಿ ಉಪನ್ಯಾಸಕರು ಆತಂಕ ಪಡಬೇಕಾಗಿಲ್ಲ. ವಾಸ್ತವವಾಗಿ ಅತಿಥಿ ಉಪನ್ಯಾಸಕರಿಗೆ ಈಗ ಬೇಡಿಕೆ ಹೆಚ್ಚಾಗುತ್ತಿದೆ ಎಂದು ಅವರು ನುಡಿದರು.
ಸರ್ಕಾರಿ ಡಿಗ್ರಿ ಕಾಲೇಜುಗಳಿಗೆ ದೈಹಿಕ ಶಿಕ್ಷಕರು ಮತ್ತು ಗ್ರಂಥಾಲಯ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಲಾಗುವುದು. ಎನ್‍ಇಪಿ ಪ್ರಕಾರ 60 ವಿದ್ಯಾರ್ಥಿಗಳಿಗೆ ಒಂದು ತರಗತಿ ಮಾಡಲಾಗುವುದು. ಡಿಗ್ರಿ ಕಾಲೇಜುಗಳಲ್ಲಿ ಸಪ್ಲಿಮೆಂಟರಿ ಪರೀಕ್ಷೆಗಳನ್ನು ಬೇಗನೆ ನಡೆಸಿ, ಕ್ಷಿಪ್ರವಾಗಿ ಫಲಿತಾಂಶ ಕೊಟ್ಟರೆ ಅನುಕೂಲವಾಗುತ್ತದೆ ಎಂದು ಅವರು ಸೂಚಿಸಿದರು.