ಮೈಸೂರು: ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ನಗರಕ್ಕೆ ಸೋಮವಾರ ಅಧಿಕೃತ ಭೇಟಿ ನೀಡಿದ್ದ ಸಂದರ್ಭದಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ(ಸಿಇಟಿ-2021) ಎಂಜಿನಿಯರಿಂಗ್ ಸೇರಿದಂತೆ ಎಲ್ಲಾ 5 ವಿಭಾಗಗಳಲ್ಲಿ ಮೊದಲ ರ್ಯಾಂಕ್ ಪಡೆದ ಹೆಚ್.ಕೆ. ಮೇಘನ್ ಮನೆಗೆ ಭೇಟಿ ಕೊಟ್ಟು ಅಭಿನಂದಿಸಿದರು. ಇದೇ ವೇಳೆ, ಮೇಘನ್ ನ ಪಠ್ಯೇತರ ಆಸಕ್ತಿಗಳ ಬಗ್ಗೆ ತಿಳಿದು ಮೆಚ್ಚುಗೆಯ ಮಾತುಗಳನ್ನಾಡಿ ಬೆನ್ನುತಟ್ಟಿದರು.
ಪಿ.ಯು.ಕಾಲೇಜು ಪ್ರಾಂಶುಪಾಲರಾದ ತಂದೆ-ತಾಯಿ, ಮೇಘನ್, ಹಿತೈಷಿಗಳು, ಮೇಘನ್ ಪಿ.ಯು. ಓದಿದ ಪ್ರಮತಿ ಹಿಲ್ ವ್ಯೂ ಕಾಲೇಜಿನ ಮುಖ್ಯಸ್ಥರು ಈ ಖುಷಿಯ ಸಂದರ್ಭಗಳಿಗೆ ಸಾಕ್ಷಿಯಾಗಿದ್ದರು. ಸಚಿವರು ಇವರ ನಡುವೆ ತಾವೂ ಒಬ್ಬರಾಗಿ ಕುಳಿತು ಮೇಘನ್ ಓದುವ ಕ್ರಮ ಸೇರಿದಂತೆ ಇನ್ನಿತರ ವಿಷಯಗಳ ಬಗ್ಗೆ ಆಸಕ್ತಿಯಿಂದ ಕೇಳಿ ಮಾಹಿತಿ ಪಡೆದರು.
‘ಮೇಘನ್ 5ನೇ ಕ್ಲ್ಯಾಸ್ ನಲ್ಲಿ ಇದ್ದಾಗಲಿಂದಲೇ ಒಲಿಂಪಿಯಾಡ್ಸ್, ರಸಪ್ರಶ್ನೆ, ಸ್ಪೆಲ್ ಬೀ ಹೀಗೆ ಬೇರೆ ಬೇರೆ ಸ್ಪರ್ಧೆಗಳನ್ನು ತೆಗೆದುಕೊಳ್ಳುತ್ತಿದ್ದ. ಈ ಸ್ಪರ್ಧೆಗಳಲ್ಲಿ ಗೆಲ್ಲಬೇಕು ಅನ್ನುವುದಕ್ಕಿಂತ ಪಾಲ್ಗೊಳ್ಳಬೇಕು ಎನ್ನುವುದೇ ಅವನಿಗೆ ಮುಖ್ಯವಾಗಿತ್ತು. ಈ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುತ್ತಾ ಅವನಿಗೆ ಎಸ್ಸೆಸ್ಸೆಲ್ಸಿ ಮುಗಿಯುವ ಹೊತ್ತಿಗೆ ‘ಅಪ್ಲಿಕೇಷನ್ ನಾಲೆಡ್ಜ್’ ನಲ್ಲಿ ತಾನು ಸುಧಾರಣೆಯಾಗಬೇಕು ಎನ್ನುವುದು ಗೊತ್ತಾಯಿತು. ಆಗ ಅದಕ್ಕೆ ಒತ್ತು ಕೊಟ್ಟ ಎಂಬುದನ್ನು ಮೇಘನ್ ತಾಯಿ ಹಂಚಿಕೊಂಡರು.
ಹಾಗೆಯೇ, ಎಸ್ಎಸ್ಎಲ್ಸಿ ಪರೀಕ್ಷೆ ಮುಗಿದ ದಿವಸವೇ ರಾತ್ರಿ ರೈಲಿನಲ್ಲಿ ಮೇಘನ್ ನನ್ನು ದಾವಣಗೆರೆಗೆ ರಸಪ್ರಶ್ನೆ ಸ್ಪರ್ಧೆಗೆ ತಾವು ಕರೆದುಕೊಂಡು ಹೋಗಿದ್ದನ್ನು ಅವರು ನೆನೆಸಿಕೊಂಡರು.
ಮೇಘನ್ ಪಡೆದಿರುವ ಈ ರ್ಯಾಂಕ್ ಕೇವಲ ಎರಡು ವರ್ಷಗಳ ಪಿ.ಯು.ಸಿ. ಸಾಧನೆಯಲ್ಲ. ಅವನು 5 ನೇ ಕ್ಲಾಸ್ ನಿಂದ ರೂಢಿಸಿಕೊಂಡ ಕ್ರಮಗಳ ಫಲವಾಗಿ ಅಡಿಪಾಯ ಭದ್ರವಾಗಿದ್ದರಿಂದ ಇದು ಸಾಧ್ಯವಾಗಿದೆ. ಜೊತೆಗೆ, ಅವನಲ್ಲಿ ವಿನಯ ಮತ್ತು ಪ್ರಾಮಾಣಿಕತೆ ಇತ್ತು. ನಾವಿಬ್ಬರೂ ಮನೆಯಲ್ಲಿರುತ್ತಿರಲಿಲ್ಲ. ಜೊತೆಗೆ ಆನ್ ಲೈನ್ ಪಾಠ ಬೇರೆ. ಆರಂಭದಲ್ಲಿ ಎರಡು-ಮೂರು ತಿಂಗಳು ಅವನಿಗೆ ಆನ್ ಲೈನ್ ಪಾಠಕ್ಕೆ ಹೊಂದಿಕೊಳ್ಳೋದು ಕಷ್ಟವಾಯ್ತು. ಆದರೂ ದೃಢನಿಶ್ಚಯ ಮಾಡಿದ. ಆನ್ ಲೈನ್ ಪಾಠ ಕೇಳುತ್ತೇನೆಂಬ ನೆಪದಲ್ಲಿ ಮೊಬೈಲ್ ಅನ್ನು ಬೇರೆ ಉದ್ದೇಶಗಳಿಗೆ ಬಳಸಿಕೊಳ್ಳಲಿಲ್ಲ ಎಂದೂ ತಾಯಿ ವಿವರಿಸಿದರು.
ಸಚಿವ ಅಶ್ವತ್ಥನಾರಾಯಣ ಅವರು, ಆಫ್ ಲೈನ್ ಟೀಚಿಂಗ್, ಆನ್ ಲೈನ್ ಟೀಚಿಂಗ್’ಗಳಲ್ಲಿ ಏನು ವ್ಯತ್ಯಾಸ ಕಂಡುಬಂತು ಎಂದು ಪ್ರಶ್ನಿಸಿದ್ದು, ಮೇಘನ್ ಆಫ್ ಲೈನ್ ಗೆ ಹೋಲಿಸಿದರೆ ಆನ್ ಲೈನ್ ಅಷ್ಟು ಆಸಕ್ತಿದಾಯಕ ಅನ್ನಿಸುತ್ತಿರಲಿಲ್ಲ. ಆದರೆ ಬೇರೆ ಮಾರ್ಗೋಪಾಯ ಇರಲಿಲ್ಲವಾದ್ದರಿಂದ ಅದನ್ನು ಒಪ್ಪಿಕೊಂಡೆ ಎಂದು ಹೇಳಿದರು.
ಇಷ್ಟಾದ ಮೇಲೆ ಸಚಿವರು ಮೇಘನ್ ಗೆ ಯಾವ ಸ್ಪೋರ್ಟ್ಸ್ ಇಷ್ಟ? ಎಂದು ಕೇಳಿದರು. ಆಗ ಅಲ್ಲಿದ್ದವರು, ಅವನೊಬ್ಬ ಒಳ್ಳೆಯ ಅಥ್ಲೀಟ್, ರನ್ನಿಂಗ್ ರೇಸ್, ಲಾಂಗ್ ಜಂಪ್ ನಲ್ಲಿ ಚೆನ್ನಾಗಿದ್ದಾನೆ ಎಂದರು. ಗಿಟಾರ್ ನುಡಿಸ್ತಾನೆ, ಜಾಗಿಂಗ್ ಮಾಡ್ತಾನೆ, ಚೆನ್ನಾಗಿ ಹಾಡ್ತಾನೆ ಎಂದರು ತಾಯಿ. ಈ ಬಗ್ಗೆ ಆಶ್ಚರ್ಯಪಟ್ಟ ಸಚಿವರು, ರಾಜ್ ಕುಮಾರ್ ಅವರ ಒಂದು ಹಾಡು ಹೇಳು ಎಂದರು. ಆಗ ಮೇಘನ್ ಹಾಡಿದ ‘ಬಾನಿಗೊಂದು ಎಲ್ಲೆ ಎಲ್ಲಿದೆ….’ ಹಾಡು ಕೇಳಿ ಭೇಷ್ ಎಂದರು.
ಓದಿನ ಜೊತೆಗೆ ನಿನಗಿರುವ ಈ ಪಠ್ಯೇತರ ಆಸಕ್ತಿಗಳ ಬಗ್ಗೆ ಸಮಾಜಕ್ಕೆ ಗೊತ್ತಾಗಬೇಕು. ಅದನ್ನು ಬೇರೆಯವರಿಗೆ ಗೊತ್ತಾಗುವಂತೆ ಹಂಚಿಕೊಳ್ಳುವ ಕೆಲಸ ಆಗಬೇಕು. ಇಲ್ಲಿಗೆ ಬರುವವರೆಗೆ ನನಗೂ ಮೇಘನ್ ಈ ಆಸಕ್ತಿಗಳ ಬಗ್ಗೆ ಗೊತ್ತಿರಲಿಲ್ಲ ಎಂದರು.
ಓದಿಗಾಗಿ ಮಗ ಮೇಘನ್ ಬೇರೆ ಆಸಕ್ತಿಗಳ ಜೊತೆ ರಾಜಿ ಮಾಡಿಕೊಳ್ಳಲಿಲ್ಲ. ಮೂವೀಸ್ ನೋಡ್ತಿದ್ದ, ಹಾಡ್ತಿದ್ದ, ಗಿಟಾರ್ ನೋಡಿಸ್ತಿದ್ದ, ಹನುಮಾನ್ ಚಾಲೀಸ್ ಹೇಳ್ತಿದ್ದ. ಆದರೆ, ಓದುವ ಸಮಯದಲ್ಲಿ ಚೆನ್ನಾಗಿ ಓದುತ್ತಿದ್ದ ಎಂದು ತಾಯಿ ತಿಳಿಸಿದರು. ಆಗ ಸಚಿವರು, ಇವನು ಎನ್.ಇ.ಪಿ.(ರಾಷ್ಟ್ರೀಯ ಶಿಕ್ಷಣ ನೀತಿ) ಆಶಯಗಳಿಗೆ ಒಳ್ಳೆಯ ಮಾಡೆಲ್ ಎಂದು ಅಭಿಪ್ರಾಯಪಟ್ಟರು.
ವಿದ್ಯಾರ್ಥಿಗಳು ಫಿಸಿಕಲಿ, ಮೆಂಟಲಿ, ಅಕಾಡೆಮಿಕಲಿ ಎಲ್ಲಾ ರೀತಿಯಲ್ಲೂ ಬೆಳೆದು ಪರಿಪೂರ್ಣವಾಗಿ ಬೆಳೆಯಬೇಕು ಅನ್ನೋದೇ ಎನ್.ಇ,ಪಿ. ಆಶಯ. ಎಷ್ಟೋ ವಿದ್ಯಾರ್ಥಿಗಳು ಓದು, ಮಾರ್ಕ್ಸ್ ತೆಗೆಯೋದು ಇವೆಲ್ಲದರಲ್ಲಿ ಮುಂದಿತ್ತಾರೆ. ಆದರೆ, ಲೈಫ್ ನಲ್ಲಿ ಸ್ಕೋರ್ ಮಾಡಕ್ಕೆ ಬಹಳ ಸಮಸ್ಯೆ ಎದುರಿಸ್ತಾರೆ. ಕಮ್ಯುನಿಕೇಷನ್, ಎಕ್ಸ್ ಪ್ರೆಷನ್, ರಿಲಾಕ್ಸೇಷನ್ ಇವುಗಳು ಗೊತ್ತಿಲ್ಲದೆ ಕಷ್ಟಕ್ಕೆ ಸಿಲುಕಿಬಿಡುತ್ತಾರೆ ಎಂದರು. ಆದರೆ ಮೇಘನ್ ಗೆ ಬೇರೆ ಬೇರೆ ಒಳ್ಳೆಯ ಆಸಕ್ತಿಗಳು ಇರುವುದರಿಂದ ಹಾಗೂ ಕಲಿಕೆಯ ಕಾನ್ಸೆಪ್ಟ್ ಬಗ್ಗೆ ಮನವರಿಕೆ ಆಗಿರುವುದರಿಂದ ಒತ್ತಡವಿಲ್ಲದೆ ಟಾಪ್ ರ್ಯಾಂಕಿಂಗ್ ಪಡೆಯುವುದು ಸಾಧ್ಯವಾಗಿದೆ ಎಂದು ಹೇಳಿದರು.
ಮಗನಲ್ಲಿ ಓದಿನ ಕಲಿಕೆಯ ಜೊತೆಗೆ ವೈವಿಧ್ಯಮಯ ಆಸಕ್ತಿಗಳನ್ನು ಪೋಷಿಸಿರುವ ಪೋಷಕರನ್ನು ಕೂಡ ಸಚಿವರು ಅಭಿನಂದಿಸಿದರು. ಪ್ರಮತಿ ಹಿಲ್ ವ್ಯೂ ಕಾಲೇಜನ್ನು ಕಟ್ಟುವಾಗ ತಮ್ಮ ಸಂಸ್ಥೆಗೆ ಒಂದು ರ್ಯಾಂಕ್ ಬರಬೇಕು ಎನ್ನುವುದು ಅದನ್ನು ನಿರ್ಮಿಸಿದವರ ಆಸೆಯಾಗಿತ್ತು ಎಂಬುದನ್ನು ಸಚಿವರಿಗೆ ತಿಳಿಸಿದಾಗ, ಅದೂ ಮೊದಲ ರಾಂಕ್ ಅನ್ನೇ ಅವರು ಗಿಟ್ಟಿಸಿದ್ದಾರೆ ಎಂದರು ಅಶ್ವತ್ಥ ನಾರಾಯಣ್.
ಈ ಭೇಟಿಯ ವೇಳೆ ಸಚಿವರು ಮೇಘನ್ ಗೆ ಟ್ಯಾಬ್ ಅನ್ನು ಕೊಡುಗೆಯಾಗಿ ಕೊಟ್ಟು ಮುಂದಿನ ವ್ಯಾಸಂಗಕ್ಕೆ ಶುಭ ಹಾರೈಸಿ, ನಿನ್ನಿಂದ ಸಮಾಜಕ್ಕೆ ಒಳ್ಳೆಯ ಕೆಲಸಗಳಾಗಲಿ ಎಂದರು.