ಬೆಂಗಳೂರು: ಮಳೆಹಾನಿ ಸಂತ್ರಸ್ಥರ ಖಾತೆಗೆ ಎರಡು ದಿನಗಳಲ್ಲಿ ತಲಾ 25 ಸಾವಿರ ರೂ. ಪರಿಹಾರ ಜಮಾ ಮಾಡಲು ಸೂಚನೆ ನೀಡಲಾಗಿದೆ.
ಬೆಂಗಳೂರಿನಲ್ಲಿ ಮಳೆ ಹಾನಿ ಸಂತ್ರಸ್ಥರಿಗೆ ಪರಿಹಾರ ವಿಚಾರಕ್ಕೆ ಸಂಬಂಧಿಸಿದಂತೆ ದಾವೋಸ್ ನಿಂದ ಸಚಿವ ಅಶ್ವತ್ಥನಾರಾಯಣ ವಿಡಿಯೋ ಕಾನ್ಫರೆನ್ಸ್ ನಡೆಸಿದ್ದಾರೆ.
ಬೆಂಗಳೂರು ಪೂರ್ವವಲಯದ ಉಸ್ತುವಾರಿ ಅಶ್ವತ್ಥನಾರಾಯಣ ಸಭೆ ನಡೆಸಿ, 2 ದಿನಗಳಲ್ಲಿ 691 ಕುಟುಂಬಗಳಿಗೆ ತಲಾ 25 ಸಾವಿರ ರೂಪಾಯಿ ನೀಡುವಂತೆ ಸೂಚನೆ ನೀಡಿದ್ದಾರೆ. 691 ಕುಟುಂಬಗಳಿಗೆ 1.73 ಕೋಟಿ ರೂಪಾಯಿಯನ್ನು ಸಂತ್ರಸ್ಥರ ಖಾತೆಗೆ ವರ್ಗಾವಣೆ ಮಾಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಸಂತ್ರಸ್ಥರ ಸಂಬಂಧಿಸಿದ ದಾಖಲೀಕರಣವನ್ನು ಮಂಗಳವಾರದೊಳಗೆ ಪೂರ್ಣಗೊಳಿಸಿ ಬುಧವಾರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಣ ವರ್ಗಾಯಿಸುವಂತೆ ಕಾಲಮಿತಿ ನಿಗದಿಪಡಿಸಿದ್ದಾರೆ.
ಪೂರ್ವ ವಲಯದಲ್ಲಿ 7 ಕಡೆ ಡೀಸಿಲ್ಟಿಂಗ್ ಮಾಡದ ವಿಚಾರಕ್ಕೆ ಸಂಬಂಧಿಸಿದಂತೆ ಗುತ್ತಿಗೆದಾರರಿಗೆ ತಕ್ಷಣ ನೋಟಿಸ್ ನೀಡಿ ಕ್ರಮಕೈಗೊಳ್ಳುವಂತೆ ತಿಳಿಸಿದ್ದು, 20 ದಿನಗಳೊಳಗೆ ಚರಂಡಿಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ನೀಲಸಂದ್ರ, ಸಂಜಯನಗರ ಸೇರಿದಂತೆ 22 ರೆಡ್ ಜೋನ್ ನಗಳಲ್ಲಿ ಸ್ಥಳಾಂತರಕ್ಕೆ ಪೂರ್ವ ಸಿದ್ಧತೆ ಮಾಡಿಕೊಳ್ಳಲು ಸೂಚನೆ ನೀಡಿದ್ದಾರೆ.