ಬೆಂಗಳೂರು: ಗ್ರಾಮೀಣ ಪ್ರದೇಶದ ಕಡು ಬಡ ಮಹಿಳೆಯರಿಗೆ ಹೈನುಗಾರಿಕೆ ಮೂಲಕ ಜೀವನೋಪಾಯ ಕಲ್ಪಿಸಿಕೊಡುವ ಕ್ಷೀರ ಸಂಜೀವಿನಿ ಯೋಜನೆ ಒಪ್ಪಂದಕ್ಕೆ ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಸಮ್ಮುಖದಲ್ಲಿ ಸಂಬಂಧಿತ ಅಧಿಕಾರಿಗಳು ಸಹಿ ಹಾಕಿದ್ದಾರೆ.
ಅದೇ ರೀತಿ ವೃತ್ತಿಪರ ಕೋರ್ಸ್ ಗಳಲ್ಲಿ ಒಂದಾದ ಐಟಿಐ ಪರೀಕ್ಷೆಯ ಸುಧಾರಣೆಗಳು ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ ಸಂಜೀವಿನಿ ಹಾಗೂ ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳಿ(ಕೆಎಂಎಫ್) ನಡುವೆ ಒಪ್ಪಂದ ಏರ್ಪಟ್ಟಿದೆ.
ಗ್ರಾಮೀಣ ಪ್ರದೇಶದಲ್ಲಿ ಆರ್ಥಿಕವಾಗಿ, ಸಾಮಾಜಿಕವಾಗಿ ದುರ್ಬಲರಾದ ಮಹಿಳೆಯರು ಸ್ವಾವಲಂಬನೆಯ ಜೀವನ ಕಟ್ಟಿಕೊಳ್ಳಲು ಮತ್ತು ಯುವಜನರಿಗೆ ವೃತ್ತಿಪರ ಶಿಕ್ಷಣ ಮತ್ತು ಉದ್ಯೋಗವಕಾಶಗಳನ್ನು ಕಲ್ಪಿಸಲು ಒಪ್ಪಂದಗಳಿಂದ ಅನುಕೂಲವಾಗಲಿದೆ ಎಂದು ಡಿಸಿಎಂ ತಿಳಿಸಿದ್ದಾರೆ.