ಬೆಂಗಳೂರು: ಆಶ್ರಯ ಯೋಜನೆ ಅಸಂವಿಧಾನಿಕ ಎಂದು ಹೈಕೋರ್ಟ್ ಹೇಳಿದ್ದು, ಈ ಯೋಜನೆಯನ್ನು ಜಾರಿಗೊಳಿಸಲಾಗದು ಎಂದು ಆದೇಶಿಸಿದೆ.
ಆಶ್ರಯ ಯೋಜನೆ ಆಸಂವಿಧಾನಿಕ ಎಂಬ ಅಂಶವನ್ನು ವಿಭಾಗೀಯ ನ್ಯಾಯಪೀಠ ಈಗಾಗಲೇ ಡಾ. ಬಿ.ಆರ್. ಅಂಬೇಡ್ಕರ್ ದಲಿತ ಮತ್ತು ಹಿಂದುಳಿದ ಅಲ್ಪಸಂಖ್ಯಾತರ ಗ್ರಾಮಾಭಿವೃದ್ಧಿ ಸಂಘ ವರ್ಸಸ್ ಕರ್ನಾಟಕ ಮತ್ತು ಇತರರ ಪ್ರಕರಣದಲ್ಲಿ ಸ್ಪಷ್ಟಪಡಿಸಿದೆ ಎಂದು ಹೈಕೋರ್ಟ್ ಹೇಳಿದೆ.
ಏಕ ಸದಸ್ಯ ನ್ಯಾಯಪೀಠದ ಆದೇಶ ಪ್ರಶ್ನಿಸಿ ಮೈಸೂರಿನ ರಮಾಬಾಯಿ, ಬೆಂಗಳೂರಿನ ಪ್ರೇಮಾ ಸೇರಿದಂತೆ 40 ಜನರು ಸಲ್ಲಿಸಿದ ಮೇಲ್ಮನವಿಯ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ, ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ಪೀಠದಲ್ಲಿ ನಡೆದು ಮೇಲ್ಮನವಿಯನ್ನು ವಜಾಗೊಳಿಸಲಾಗಿದೆ.
ರಾಜ್ಯ ಸರ್ಕಾರ ತನ್ನ ಅಧಿಕಾರ ವ್ಯಾಪ್ತಿ ಮೀರಿ ಯೋಜನೆ ಜಾರಿಗೆ ತಂದಿದೆ ಎಂದು ಹೈಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ. ವಸತಿ ರಹಿತರಿಗೆ ಸೂರು ಕಲ್ಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ರೂಪಿಸಿದ ಆಶ್ರಯ ಯೋಜನೆ ಜಾರಿಗೊಳಿಸಲಾಗದು ಎಂದು ಯೋಜನೆ ಅಡಿ ಹಂಚಿಕೆಯಾದ ನಿವೇಶನಗಳಿಗೆ ಹಕ್ಕುಪತ್ರ ವಿತರಿಸಲು ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ವೇಳೆ ವಿಭಾಗೀಯ ಪೀಠ ತಿಳಿಸಿದೆ.
ಸಂವಿಧಾನದ 162ನೇ ವಿಧಿಯ ಅಡಿಯಲ್ಲಿ ಲಭ್ಯವಾದ ಕಾರ್ಯ ಅಧಿಕಾರ ಬಳಸಿಕೊಂಡು ಸರ್ಕಾರ ತನ್ನ ಅಧಿಕಾರ ವ್ಯಾಪ್ತಿ ಮೀರಿ ಆಶ್ರಯ ಯೋಜನೆ ರೂಪಿಸಿದೆ. ಇದರಿಂದ ಯೋಜನೆ ಜಾರಿ ಮಾಡಲಾಗದು ಹಾಗೂ ಯೋಜನೆ ರದ್ದು ಪಡಿಸಲಾಗಿದೆ ಎಂಬುದಾಗಿ ಅಂಬೇಡ್ಕರ್ ದಲಿತ ಮತ್ತು ಹಿಂದುಳಿದ ಅಲ್ಪಸಂಖ್ಯಾತರ ಗ್ರಾಮಾಭಿವೃದ್ಧಿ ಸಂಘ ಮತ್ತು ಕರ್ನಾಟಕ ಸರ್ಕಾರ ನಡುವಿನ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಘೋಷಣೆ ಮಾಡಿರುವುದು ಸ್ಪಷ್ಟವಾಗಿರುವ ಕಾರಣ ಪರಿಹಾರ ಕಲ್ಪಿಸಲು ಸಾಧ್ಯವಿಲ್ಲ ಎಂದ ವಿಭಾಗೀಯ ಪೀಠ ಮೇಲ್ಮನವಿ ವಜಾಗೊಳಿಸಿದೆ.