ಕೇರಳದ ಗಡಿನಾಡು ಕಾಸರಗೋಡು ಜಿಲ್ಲೆ ಮಂಜೇಶ್ವರ ಶಾಸಕ ಎ.ಕೆ.ಎಂ. ಅಶ್ರಫ್ ಕೇರಳ ವಿಧಾನಸಭೆಯಲ್ಲಿ ಸೋಮವಾರ ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಕಳೆದ ತಿಂಗಳು ಕೇರಳ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಯುಡಿಎಫ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅಶ್ರಫ್ ಅವರು ಬಿಜೆಪಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್ ಅವರನ್ನು ಪರಾಭವಗೊಳಿಸಿದ್ದರು. ಅವರು ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸುವ ಮೂಲಕ ಕನ್ನಡಿಗರ ಮನಗೆದ್ದಿದ್ದಾರೆ. ಅಲ್ಲಾಹು ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಹಂಗಾಮಿ ಸಭಾಪತಿ ರಹೀಂ ಅವರು ನೂತನ ಶಾಸಕರಿಗೆ ಪ್ರಮಾಣವಚನ ಬೋಧಿಸಿದರು. ಮಂಜೇಶ್ವರ ಗೋವಿಂದ ಪೈ ಸ್ಮಾರಕ ಕಾಲೇಜಿನಲ್ಲಿ ಕನ್ನಡ ಎಂಎ ಮಾಡಿರುವ ಅಶ್ರಫ್ ಅವರಿಗೆ ತುಳು, ಮಲಯಾಳಂ, ಉರ್ದು, ಇಂಗ್ಲಿಷ್ ಕರಗತವಾಗಿದೆ.
ಅವರು ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ಹಿಂದೆ ಮಂಜೇಶ್ವರದಿಂದ ಶಾಸಕರಾಗಿದ್ದ ಮುಸ್ಲಿಂ ಲೀಗ್ ನ ಚೆರ್ಕುಳಂ ಅಬ್ದುಲ್ಲಾ, ಪಿ.ಬಿ. ಅಬ್ದುಲ್ ರಜಾಕ್, ಎಂ.ಸಿ. ಕಮರುದ್ದೀನ್ ಅವರು ಕೂಡ ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸಿದ್ದರು. ಅವರ ಪರಂಪರೆಯನ್ನು ಅಶ್ರಫ್ ಮುಂದುವರೆಸಿದ್ದಾರೆ.