ಬೆಂಗಳೂರು: ಒಕ್ಕಲಿಗರ ಬಗ್ಗೆ ಮಾತನಾಡುವಾಗ ಎಚ್ಚರಿಕೆಯಿಂದ ಮಾತಾಡಿ. ಒಕ್ಕಲಿಗರು ಅಷ್ಟೇನೂ ಚೀಪ್ ಅಲ್ಲ, ಎಚ್ಚರಿಕೆ ಕೊಡುತ್ತಿದ್ದೇವೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಪದೇಪದೇ ಒಕ್ಕಲಿಗ ಜಾತಿ ವಿಚಾರ ಬೀದಿಗೆ ತಂದು ರಂಪಾಟ ಮಾಡಲಾಗುತ್ತಿದೆ. ಇದರಿಂದ ಒಕ್ಕಲಿಗ ಸಮುದಾಯ, ಎಲ್ಲಾ ಸ್ವಾಮೀಜಿಗಳಿಗೆ ನೋವಾಗಿದೆ. ರಾಜಕೀಯಕ್ಕಾಗಿ ಒಕ್ಕಲಿಗ ಸಮುದಾಯ ದುರ್ಬಳಕೆಯಾಗುತ್ತಿದೆ. ಡಿ.ಕೆ. ಶಿವಕುಮಾರ್ ಮತ್ತು ಜಮೀರ್ ಅಹಮದ್ ಖಾನ್ ಗೆ ಒಳ್ಳೆಯದಾಗಲ್ಲ ಎಂದು ಹೇಳಿದ್ದಾರೆ.
ಒಕ್ಕಲಿಗ ಸಮುದಾಯ ಅನ್ನ ಕೊಡುವ ಸಮುದಾಯ. ಕುವೆಂಪು ಹುಟ್ಟಿದ ಸಮುದಾಯದ ನಾವು ವಿಶ್ವಮಾನವರಾಗಬೇಕು. ಕಳೆದ ಒಂದು ವಾರದಿಂದ ಪರ ವಿರೋಧ ಚರ್ಚೆಗಳಿಂದ ನೋವಾಗಿದೆ. ನಾನು ಒಬ್ಬ ಒಕ್ಕಲಿಗನಾಗಿ ತುಂಬಾ ನೋವಿನಿಂದ ಹೇಳುತ್ತಿದ್ದೇನೆ. ಒಕ್ಕಲಿಗ ಸಮುದಾಯ ಒಂದು ಪಕ್ಷದ ಸಮುದಾಯ ಎನ್ನಲಾಗಲ್ಲ. ಜಾತಿ ಹೆಸರಿನಲ್ಲಿ ಮುಖ್ಯಮಂತ್ರಿ ಆಗಲು ಸಾಧ್ಯವೇ ಎಂದು ಅಶೋಕ್ ಪ್ರಶ್ನಿಸಿದ್ದಾರೆ.
ಒಕ್ಕಲಿಗ ಸಮುದಾಯ ತಮ್ಮದೇ ಬ್ರಾಂಡ್ ಎಂದು ಕಚ್ಚಾಡುತ್ತಿದ್ದಾರೆ. ಹೆಚ್.ಡಿ. ಕುಮಾರಸ್ವಾಮಿ, ಡಿ.ಕೆ. ಶಿವಕುಮಾರ್ ಜಗಳ ಮಾಡುತ್ತಿದ್ದಾರೆ. ಕಾಂಗ್ರೆಸ್, ಜೆಡಿಎಸ್ ಜಗಳದಲ್ಲಿ ಬಿಜೆಪಿಗೆ ಲಾಭವಾಗುತ್ತದೆ ಎಂದು ಅಶೋಕ್ ಹೇಳಿದ್ದಾರೆ.