ಭಾರತ್‌ಪೇ ಸಹ-ಸಂಸ್ಥಾಪಕ ಅಶ್ನೀರ್ ಗ್ರೋವರ್ ಅವರು ಇತ್ತೀಚೆಗೆ ಐಷಾರಾಮಿ ಕಾರುಗಳ ಬಗ್ಗೆ ತಮ್ಮ ಮೋಹದ ಬಗ್ಗೆ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ್ದಾರೆ. ‘ವಗೇರಾ ವಗೇರಾ’ ಎಂಬ ಹೆಸರಿನ ಪಾಡ್‌ಕಾಸ್ಟ್‌ನಲ್ಲಿ ಅವರು ತಮ್ಮ ಕಾರಿನ ಮೋಹವನ್ನು ಬಿಚ್ಚಿಟ್ಟಿದ್ದಾರೆ.
ನಾನು ನಾಲ್ಕು ಕಾರುಗಳನ್ನು ಹೊಂದಿದ್ದೇನೆ. ಇದೇನು ಹೊಸ ವಿಷಯವಲ್ಲ. ಅನೇಕ ಉದ್ಯಮಿಗಳು ಕಾರುಗಳ ಬಗ್ಗೆ ನನ್ನಂತೆಯೇ ವ್ಯಾಮೋಹ ಬೆಳೆಸಿಕೊಂಡಿದ್ದಾರೆ ಎಂದು ಅಶ್ನೀರ್ ತಿಳಿಸಿದ್ದಾರೆ.
“ನನಗೆ ಕಾರುಗಳ ಬಗ್ಗೆ ಒಲವು ಇದೆ ಮತ್ತು ಅದು ನನಗಷ್ಟೇ ಅಲ್ಲ, ಜೊಮ್ಯಾಟೊ ಸಂಸ್ಥಾಪಕ ದೀಪಿಂದರ್ ಅವರು ಸಿಕ್ಕಾಪಟ್ಟೆ ಕಾರಿನ ಗೀಳು ಹೊಂದಿದ್ದಾರೆ. ಅವರು ಪ್ರತಿ ಬಾರಿಯೂ ಸ್ಪೋರ್ಟ್ಸ್ ಕಾರನ್ನು ಖರೀದಿಸುತ್ತಾರೆ. ಅವರು ಐಷಾರಾಮಿ ಕಾರುಗಳನ್ನು ಓಡಿಸುವುದರಿಂದ ನಮಗೆ ಸ್ವಲ್ಪ ಕಿರಿಕಿರಿಯಾಗುತ್ತಿತ್ತು. ಏಕೆಂದರೆ ಸ್ಪೋರ್ಟ್ಸ್ ಕಾರುಗಳನ್ನು ಓಡಿಸುತ್ತಿದ್ದರು. ಅದೇ ಹುಚ್ಚು ನನಗೂ ಹಿಡಿದಿದೆ ಎಂದಿದ್ದಾರೆ.
” ಹೊಸ ಕಾರಿನಲ್ಲಿ ಗೀರು ಉಂಟಾದರೆ ಅದು ನನ್ನನ್ನು ಒಂದು ವಾರದವರೆಗೆ ಅಸಮಾಧಾನಗೊಳಿಸಬಹುದು, ಆದರೆ ಸೆಕೆಂಡ್ ಹ್ಯಾಂಡ್ ಕಾರುಗಳು ಒಂದೆರಡು ಗೀರುಗಳೊಂದಿಗೆ ಬರುತ್ತವೆ. ಆದ್ದರಿಂದ ಹೊಸ ಕಾರಿನ ಬದಲು ಸೆಕೆಂಡ್ ಹ್ಯಾಂಡ್ ಕಾರುಗಳನ್ನು ಹೆಚ್ಚಿಗೆ ಜಾಗ್ರತೆಯಾಗಿ ಓಡಿಸಬೇಕೆಂದು ಇಲ್ಲ” ಎಂದು ತಮಾಷೆ ಮಾಡಿದ್ದಾರೆ.
ಒಮ್ಮೆ ಅವರು ಕ್ರಿಕೆಟಿಗ ಎಂಎಸ್ ಧೋನಿಗೆ ಸೇರಿದ್ದು ಎಂದು ನಂಬಿ ಸೆಕೆಂಡ್ ಹ್ಯಾಂಡ್ ಐಷಾರಾಮಿ ಕಾರನ್ನು ಖರೀದಿಸಿದರು ಎಂಬ ವಿಷಯವನ್ನೂ ಹಂಚಿಕೊಂಡಿದ್ದಾರೆ. “ನಾನು ಜಾರ್ಖಂಡ್‌ನ GLS (Mercedes-Benz GLS) ಅನ್ನು ಖರೀದಿಸಿದೆ ಮತ್ತು ಅದು VIP ಸಂಖ್ಯೆಯನ್ನು ಹೊಂದಿತ್ತು. ವಾಹನವು ಒಮ್ಮೆ ಧೋನಿಗೆ ಸೇರಿದೆ ಎಂದು ಹೇಳಿಕೊಂಡು ಅದನ್ನು ಖರೀದಿಸಲು ಡೀಲರ್ ನನಗೆ ಮನವರಿಕೆ ಮಾಡಿದರು. ನಾನು ನಂಬಿದ್ದೆ. ಆಮೇಲೆ ಅದು ಸುಳ್ಳು ಎಂದು ತಿಳಿಯಿತು” ಎಂದಿದ್ದಾರೆ.