ಪುಣೆ: ಪುಣೆಯಲ್ಲಿ ಗಂಡು ಮಗು ಜನಿಸದ ಕಾರಣ ಮಹಿಳೆಗೆ ಕಿರುಕುಳ ನೀಡಿದ ಗಂಡನ ಮನೆಯವರು ಮೂಢನಂಬಿಕೆಯಿಂದ ಆಕೆಯನ್ನು ಬೆತ್ತಲೆಗೊಳಿಸಿ ಬೂದಿ ಹಚ್ಚಿದ್ದಾರೆ.
ಗಂಡು ಮಗುವಿಗೆ ಜನ್ಮ ನೀಡಲು ಸಹಾಯ ಮಾಡುತ್ತದೆ ಎಂದು ನಂಬಿಸಿ ದೇವಮಾನವನೊಬ್ಬ ನೀಡಿದ ಚಿತಾಭಸ್ಮವನ್ನು ಆಕೆಯ ಬೆತ್ತಲೆ ದೇಹದ ಮೇಲೆ ಲೇಪಿಸಲಾಗಿದೆ. ಮೂಢನಂಬಿಕೆಯ ಆಚರಣೆಯ ಜೊತೆಗೆ, ಆಕೆಯ ಪತಿ ಮತ್ತು ಅತ್ತೆಯಿಂದ ನಾಲ್ಕು ವರ್ಷಗಳ ಕಾಲ ಮಹಿಳೆ ಮಾನಸಿಕ ಮತ್ತು ದೈಹಿಕ ಕಿರುಕುಳಕ್ಕೆ ಒಳಗಾಗಿದ್ದಳು ಎಂದು ದೂರು ನೀಡಲಾಗಿದೆ.
ಮಹಿಳೆ ತನ್ನ ಅತ್ತೆ ಕುಟುಂಬದವರೊಂದಿಗೆ ಖೇಡ್ ತಾಲೂಕಿನ ಹಳ್ಳಿಯೊಂದರಲ್ಲಿ ವಾಸಿಸುತ್ತಿದ್ದಾಳೆ. ಇತ್ತೀಚೆಗೆ ತನ್ನ ಹೆತ್ತವರ ಮನೆಗೆ ಮರಳಿದ್ದಾಳೆ. ಆಕೆ ಇಬ್ಬರು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ ನಂತರ ಆಕೆಯ ಪತಿ ಮತ್ತು ಅತ್ತೆ-ಮಾವ ಕಿರುಕುಳ ನೀಡಿದ್ದಾರೆ ಎಂದು ದೂರಲಾಗಿದೆ.
2016 ರಲ್ಲಿ ಮದುವೆಯಾಗಿದ್ದು, ಒಂದು ವರ್ಷದ ನಂತರ ತನ್ನ ಮೊದಲ ಮಗಳಿಗೆ ಜನ್ಮ ನೀಡಿದ್ದಾಳೆ. ಹೆಣ್ಣು ಮಗುವಿನ ಜನನದ ನಂತರ, ಆರೋಪಿಗಳು ಮಹಿಳೆಗೆ ಮಾನಸಿಕ ಮತ್ತು ದೈಹಿಕವಾಗಿ ಹಿಂಸಿಸಲು ಆರಂಭಿಸಿದ್ದಾರೆ. ಮನೆಗೆ ದುರಾದೃಷ್ಟ ತಂದಿದ್ದಾಳೆ ಎಂದು ಕಿರುಕುಳ ನೀಡುತ್ತಿದ್ದರು. ಅಲ್ಲದೇ ತವರು ಮನೆಯಿಂದ ಹಣ, ಒಡವೆ ತರುವಂತೆ ಬಲವಂತ ಮಾಡಿದ್ದಾರೆ.
2020 ರಲ್ಲಿ ಮಹಿಳೆ ಮತ್ತೆ ಹೆಣ್ಣು ಮಗುವಿಗೆ ಜನ್ಮ ನೀಡಿದ ನಂತರ ಕಿರುಕುಳ ಹೆಚ್ಚಾಯಿತು. ಮಹಿಳೆಯ ಪತಿಯು ತಮ್ಮ ಹೆಣ್ಣು ಮಕ್ಕಳನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಕಿರುಕುಳ ನಿಲ್ಲದಿದ್ದಾಗ, ಮಹಿಳೆ ತನ್ನ ಹೆತ್ತವರ ಮನೆಗೆ ಹೋಗಿ ಅವರೊಂದಿಗೆ ವಾಸಿಸಲು ಪ್ರಾರಂಭಿಸಿದಳು.
ಆಗಸ್ಟ್ ಮೂರನೇ ವಾರದಲ್ಲಿ ಮಹಿಳೆಯ ಪತಿ ದೇವಸ್ಥಾನಕ್ಕೆ ಹೋಗಬೇಕಿದೆ ಎಂದು ಪುಣೆಗೆ ಕರೆದುಕೊಂಡು ಹೋಗಿದ್ದಾನೆ. ದೇವಮಾನವನನ್ನು ಭೇಟಿ ಮಾಡಿದ್ದು, ಆತ ದಂಪತಿಗೆ ಚಿತಾಭಸ್ಮದ ಪ್ಯಾಕೆಟ್ ಅನ್ನು ನೀಡಿದ್ದಾನೆ. ನಂತರ ಅದನ್ನು ಆಕೆಯ ಬೆತ್ತಲೆ ದೇಹದ ಮೇಲೆ ಹಚ್ಚಲಾಗಿದೆ.
ಮಹಲುಂಗೆ ಪೋಲಿಸ್ ಪೋಸ್ಟ್ನ ಇನ್ಸ್ ಪೆಕ್ಟರ್ ಅರವಿಂದ್ ಪವಾರ್, ಮಹಿಳೆ ಇತ್ತೀಚೆಗೆ ದೂರಿನೊಂದಿಗೆ ನಮ್ಮನ್ನು ಸಂಪರ್ಕಿಸಿದರು. ಪ್ರಾಥಮಿಕ ವಿಚಾರಣೆಯ ನಂತರ ಎಫ್ಐಆರ್ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.