ಬೆಂಗಳೂರು: 7,000 ರೂ. ಗೌರವಧನ ಒಪ್ಪದ ಆಶಾ ಕಾರ್ಯಕರ್ತೆಯರು ಅಹೋರಾತ್ರಿ ಹೋರಾಟ ಮುಂದುವರೆಸಿದ್ದಾರೆ.
ಫ್ರೀಡಂ ಪಾರ್ಕ್ ನಲ್ಲಿ ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ಕೈಗೊಳ್ಳಲಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಸಚಿವ ದಿನೇಶ್ ಗುಂಡೂರಾವ್, ಆಶಾ ಕಾರ್ಯಕರ್ತೆಯರಿಗೆ ಮಾಸಿಕ ಗೌರವದನವನ್ನು 7,000 ರೂ.ಗೆ ಹೆಚ್ಚಳ ಮಾಡಿ ನೇರ ವರ್ಗಾವಣೆಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಇದನ್ನು ಒಪ್ಪದ ಆಶಾ ಕಾರ್ಯಕರ್ತೆಯರು ಹೋರಾಟ ಮುಂದುವರೆಸಿದ್ದಾರೆ.
ಫೆಬ್ರವರಿ 16ರಂದು ರಾಜ್ಯ ಬಜೆಟ್ ಮಂಡನೆ ಹಿನ್ನೆಲೆಯಲ್ಲಿ ಫ್ರೀಡಂ ಪಾರ್ಕ್ ನಲ್ಲಿ ಆಶಾ ಕಾರ್ಯಕರ್ತೆಯರಿಂದ ಅಹೋರಾತ್ರಿ ಹೋರಾಟ ನಡೆಸಲಾಗಿದ್ದು, ಈ ಬಜೆಟ್ ನಲ್ಲಾದರೂ ತಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿದ್ದಾರೆ.
ರಾಜ್ಯದ ಮೂಲೆ ಮೂಲೆಯಿಂದ ಆಶಾ ಕಾರ್ಯಕರ್ತೆಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ. ಅಹೋರಾತ್ರಿ ಹೋರಾಟದಲ್ಲಿ 2000ಕ್ಕೂ ಹೆಚ್ಚು ಕಾರ್ಯಕರ್ತೆಯರು ಭಾಗಿಯಾಗಿದ್ದಾರೆ. ಸರ್ಕಾರ ಲಿಖಿತ ಭರವಸೆ ನೀಡಬೇಕು ಎಂದು ಆಶಾ ಕಾರ್ಯಕರ್ತೆಯರು ಒತ್ತಾಯಿಸಿದ್ದಾರೆ.
15,000 ರೂ. ವೇತನ, ಆರ್‌ಸಿಎಚ್ ಪೋರ್ಟಲ್ ಸಮಸ್ಯೆ ನಿವಾರಣೆ, ಗಂಭೀರ ಕಾಯಿಲೆಗೆ ಒಳಗಾದ ಕಾರ್ಯಕರ್ತರಿಗೆ ವೇತನ ಸಹಿತ ರಜೆ ನೀಡಬೇಕು. ಮೊಬೈಲ್ ಆಧಾರಿತ ಕೆಲಸ ಮಾಡಿಸಬಾರದು, ಡೈರಿ, ಸಮವಸ್ತ್ರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.