ಬೆಂಗಳೂರು: ಮಾಸಿಕ 15 ಸಾವಿರ ರೂ. ಗೌರವಧನ ಸೇರಿ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸ್ವಾತಂತ್ರ್ಯ ಉದ್ಯಾನದಲ್ಲಿ ಅನಿರ್ದಿಷ್ಟಾಧಿ ಹೋರಾಟ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರ ಮನವೊಲಿಸಲು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ನಡೆಸಿದ ಪ್ರಯತ್ನ ಫಲ ನೀಡಿಲ್ಲ.
ಮಂಗಳವಾರದಿಂದ ಆಶಾ ಕಾರ್ಯಕರ್ತೆಯರು ಅನಿರ್ದಿಷ್ಟಾವಧಿ ಹೋರಾಟ ಮುಂದುವರೆಸಿದ್ದಾರೆ. ಈ ನಡುವೆ ಪ್ರತಿಭಟನಾನಿರತ 500 ಆಶಾ ಕಾರ್ಯಕರ್ತೆಯರಿಗೆ ಕೆಮ್ಮು, ಜ್ವರ, ನೆಗಡಿಯಾಗಿದ್ದು ಉಚಿತವಾಗಿ ಔಷಧೋಪಾಚಾರ ನೀಡಲಾಗಿದೆ.
ರಾಜ್ಯದ ಹಲವೆಡೆಯಿಂದ ಪ್ರತಿಭಟನೆಗೆ ಆಗಮಿಸಿರುವ ಮಹಿಳೆಯರು ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಕೊರೆಯುವ ಚಳಿಯಲ್ಲಿ ಪ್ರತಿಭಟನಾ ಸ್ಥಳದಲ್ಲಿ ಹೋರಾಟ ಮುಂದುವರೆಸಿದ್ದು, ಅನೇಕರಿಗೆ ಮೈ ಕೈ ನೋವು, ತಲೆ ನೋವು, ನೆಗಡಿ, ಕೆಮ್ಮು ಸೇರಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಸಂಘದ ಮನವಿಯ ಮೇರೆಗೆ ಮೆಡಿಕಲ್ ಸರ್ವಿಸ್ ಸಂಘಟನೆಯವರು ಫ್ರೀಡಂ ಪಾರ್ಕ್ ನಲ್ಲಿ ಟೆಂಟ್ ನಿರ್ಮಿಸಿ ಉಚಿತ ಚಿಕಿತ್ಸೆ ನೀಡಲಾಗಿದೆ.