ನವದೆಹಲಿ: ಕೊರೋನಾ ವೈರಸ್ ರೂಪಾಂತರಗೊಳ್ಳುತ್ತಿರುವುದರಿಂದ ಎರಡು ಡೋಸ್ ಲಸಿಕೆ ಪಡೆದುಕೊಂಡವರು ಕೂಡ ಮಾಸ್ಕ್ ಧರಿಸುವುದು, ದೈಹಿಕ ಅಂತರ ಕಾಪಾಡಿಕೊಳ್ಳುವುದನ್ನು ಮುಂದುವರೆಸಬೇಕೆಂದು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ(ಏಮ್ಸ್) ನಿರ್ದೇಶಕ ಡಾ. ರಣದೀಪ್ ಗುಲೇರಿಯಾ ಹೇಳಿದ್ದಾರೆ.
ಕೊರೊನಾ ಸೋಂಕಿನ ವಿರುದ್ಧ ಲಸಿಕೆ ನೀಡುತ್ತಿದ್ದು, ಎರಡು ಡೋಸ್ ಪಡೆದವರು ಕೂಡ ಮಾಸ್ಕ್ ಧರಿಸಬೇಕು. ಅಂತರ ಕಾಪಾಡಿಕೊಳ್ಳುವುದನ್ನು ಮುಂದುವರೆಸಬೇಕೆಂದು ಅವರು ತಿಳಿಸಿದ್ದಾರೆ.
ಎರಡು ಡೋಸ್ ಲಸಿಕೆ ಪಡೆದುಕೊಂಡವರು ಇನ್ನು ಮುಂದೆ ಮಾಸ್ಕ್ ಧರಿಸಬೇಕಿಲ್ಲ. ಸಾಂಕ್ರಾಮಿಕ ರೋಗದ ಮೊದಲು ಇದ್ದ ಚಟುವಟಿಕೆಗಳನ್ನು ಪ್ರಾರಂಭಿಸಬಹುದು ಎಂದು ಅಮೆರಿಕಾದ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರ(ಸಿಡಿ) ತಿಳಿಸಿದ ಒಂದು ದಿನದ ನಂತರ ಏಮ್ಸ್ ನಿರ್ದೇಶಕರು ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಕೊರೋನಾ ವೈರಸ್ ರೂಪಾಂತರಗೊಳ್ಳುತ್ತದೆ. ರೂಪಾಂತರಗೊಂಡ ವೈರಸ್ ಗೆ ಲಸಿಕೆಗಳು ರಕ್ಷಣೆ ನೀಡುತ್ತವೆ ಎಂದು ನಾವು ಹೇಳಲಾಗುವುದಿಲ್ಲ. ಮಾಸ್ಕ್ ಧರಿಸುವುದು ಮತ್ತು ಅಂತರ ಕಾಪಾಡಿಕೊಳ್ಳುವುದು ಉತ್ತಮ. ರೂಪಾಂತರ ವೈರಸ್ ಲಸಿಕೆ ಏನೇ ಇರಲಿ, ಮಾಸ್ಕ್ ಮತ್ತು ದೈಹಿಕ ಅಂತರ ನಮ್ಮನ್ನು ರಕ್ಷಿಸುತ್ತದೆ ಎಂದು ಗುಲೇರಿಯಾ ಅಭಿಪ್ರಾಯಪಟ್ಟಿದ್ದಾರೆ.
ಅಧಿಕಾರಿಯೊಬ್ಬರು ನೀಡಿರುವ ಮಾಹಿತಿಯಂತೆ, ಸದ್ಯಕ್ಕೆ ಭಾರತದಲ್ಲಿ ಮಾಕ್ಸ್ ಧರಿಸಬೇಡಿ ಎಂದು ಹೇಳುವಂತಹ ಪರಿಸ್ಥಿತಿ ಇಲ್ಲ ಎನ್ನಲಾಗಿದೆ.
ಕೊರೋನಾ ಲಸಿಕೆಗಳು ಅನಾರೋಗ್ಯದಿಂದ ರಕ್ಷಿಸುವಲ್ಲಿ ಪರಿಣಾಮಕಾರಿಯಾಗಿವೆ ಎಂದು ಅಮೆರಿಕ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರ ಹೇಳಿದೆ. ಅದರ ಪ್ರಕಾರ, 2 ಡೋಸ್ ಲಸಿಕೆ ಪಡೆದವರು ಹಿಂದಿನ ಕೆಲಸಗಳನ್ನು ಪುನಾರಂಭಿಸಬಹುದು.