ವಯಸ್ಸು ಹೆಚ್ಚಾಗ್ತಿದ್ದಂತೆ ಆರೋಗ್ಯದ ಜೊತೆಗೆ ತಿನ್ನುವ, ಮಲಗುವ ವಿಧಾನದಲ್ಲೂ ಬದಲಾವಣೆಯಾಗುತ್ತದೆ. ನಮ್ಮ ಉತ್ತಮ ಆರೋಗ್ಯ ಹಾಗೂ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಪ್ರತಿ ದಿನ ರಾತ್ರಿ ನಿದ್ರೆ ಅವಶ್ಯಕ. ಆದರೆ 60 ವರ್ಷ ಮೇಲ್ಪಟ್ಟ ಹಿರಿಯರಿಗೆ ನಿದ್ರಾಹೀನತೆ ಕಾಡುತ್ತದೆ. ಕೆಲವರಿಗೆ ತಡರಾತ್ರಿಯವರೆಗೆ ನಿದ್ರೆ ಬರುವುದಿಲ್ಲ. ಕೆಲವರಿಗೆ ಆಗಾಗ ಎಚ್ಚರವಾಗುತ್ತಿರುತ್ತದೆ. ಮತ್ತೆ ಕೆಲವರು ಸಣ್ಣ ಶಬ್ಧವಾದ್ರೂ ಎಚ್ಚರಗೊಳ್ತಾರೆ.
ಯಾವ ವ್ಯಕ್ತಿಗೆ ಎಷ್ಟು ಗಂಟೆಗಳ ನಿದ್ರೆ ಅಗತ್ಯವಿದೆ ಎಂದು ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲ. ಅದು ಅವರ ದೈಹಿಕ ಅಗತ್ಯಗಳನ್ನು ಅವಲಂಬಿಸಿರುತ್ತದೆ. 60 ವರ್ಷ ಮೇಲ್ಪಟ್ಟವರು ಪ್ರತಿ ರಾತ್ರಿ 7 ರಿಂದ 9 ಗಂಟೆಗಳ ಕಾಲ ನಿದ್ರೆ ಮಾಡಬೇಕು. ಆದ್ರೆ ಕೆಲವರು 5 ಗಂಟೆ ನಿದ್ರೆ ಮಾಡುವುದೂ ಕಷ್ಟವೆನ್ನುತ್ತಾರೆ. ಇದಕ್ಕೆ ಅನೇಕ ಕಾರಣವಿದೆ.
ಸಂಧಿವಾತ ನೋವು, ಅಸ್ತಮಾ, ಆಸ್ಟಿಯೊಪೊರೋಸಿಸ್, ಎದೆಯುರಿ ವಯಸ್ಸಾದವರಲ್ಲಿ ನಿದ್ರಾಹೀನತೆಗೆ ಕಾರಣವಾಗುವ ಕೆಲವು ಕಾಯಿಲೆಗಳು. ಮುಟ್ಟು ನಿಂತಿದ್ದರೂ ಕೆಲ ಮಹಿಳೆಯರಿಗೆ ರಾತ್ರಿ ಬೆವರುವ ಸಮಸ್ಯೆಯಿರುತ್ತದೆ. ಇದು ನಿದ್ರಾಹೀನತೆಗೆ ಕಾರಣವಾಗುತ್ತದೆ. ವೃದ್ಧರು ಅನಾರೋಗ್ಯದ ಕಾರಣ ಕೆಲ ಔಷಧಿಗಳ ಸೇವನೆ ಮಾಡ್ತಾರೆ. ಇದು ನಿದ್ರೆ ಮೇಲೆ ಪರಿಣಾಮ ಬೀರುತ್ತದೆ. ವ್ಯಾಯಾಮ ಮಾಡದಿದ್ದರೆ ಸಾರ್ವಕಾಲಿಕ ನಿಷ್ಕ್ರಿಯತೆ ಕಾಡುತ್ತದೆ. ಇದು ಸರಿಯಾಗಿ ನಿದ್ರೆ ಬರದಿರಲು ಕಾರಣವಾಗುತ್ತದೆ. ನಿಯಮಿತ ಲಘು ವ್ಯಾಯಾಮ ಅಥವಾ ಏರೋಬಿಕ್ಸ್ ಪ್ರಯೋಜನಕಾರಿಯಾಗಿದೆ. ನಿವೃತ್ತಿಯ ನಂತರ ಕೆಲವೊಂದು ಒತ್ತಡ ಕಾಡುತ್ತದೆ. ಮಕ್ಕಳು, ಆರ್ಥಿಕ ಪರಿಸ್ಥಿತಿ ಒತ್ತಡ ಹೆಚ್ಚು ಮಾಡಿ ನಿದ್ರೆಗೆ ಅಡ್ಡಿಯಾಗುತ್ತದೆ.
ಉತ್ತಮ ನಿದ್ರೆ ಬೇಕೆನ್ನುವವರು ನಿದ್ರೆಗೆ ಕನಿಷ್ಠ ಒಂದು ಗಂಟೆ ಮೊದಲು ಟಿವಿ, ಕಂಪ್ಯೂಟರ್, ಸ್ಮಾರ್ಟ್‌ಫೋನ್‌ನಂತಹ ಎಲ್ಲದರಿಂದ ದೂರವಿರಿ. ಇದರಿಂದ ದೇಹದಲ್ಲಿ ಮೆಲಟೋನಿನ್ ಉತ್ಪಾದನೆ ಶುರುವಾಗುತ್ತದೆ. ಉತ್ತಮ ನಿದ್ರೆಗೆ ಕಾರಣವಾಗುತ್ತದೆ. ಕತ್ತಲೆಯಿರುವ ರೂಮಿನಲ್ಲಿ ನಿದ್ರೆ ಮಾಡಿ. ಮಲಗುವ ಕೋಣೆ ತಂಪಾಗಿರಲಿ. ಮಲಗುವ ಕೋಣೆಯಿಂದ ಗಡಿಯಾರವನ್ನು ದೂರವಿಡಿ. ಅದ್ರ ಶಬ್ಧ ನಿದ್ರೆಗೆಡಿಸಬಹುದು. ಪ್ರತಿ ದಿನ ಒಂದೇ ಸಮಯದಲ್ಲಿ ನಿದ್ರೆ ಮಾಡಿ. ನಿಗದಿತ ಸಮಯದಲ್ಲಿ ಏಳುವ ಅಭ್ಯಾಸ ಮಾಡಿಕೊಳ್ಳಿ. ಬಯಸಿದ್ರೆ ಮಲಗುವ ಮುನ್ನ ಬೆಚ್ಚಗಿನ ನೀರಿನಿಂದ ಸ್ನಾನ ಮಾಡಬಹುದು. ಉತ್ತಮ ಸಂಗೀತವನ್ನು ಕೇಳಬಹುದು. ಉತ್ತಮ ಪುಸ್ತಕವನ್ನು ಓದಬಹುದು. ಧ್ಯಾನ ಮಾಡಬಹುದು.