ಉತ್ತರ ಪ್ರದೇಶದಲ್ಲಿ ನಡೆದ ಮದುವೆ ಸಮಾರಂಭವೊಂದರಲ್ಲಿ ವರ, ಪದೇ ಪದೇ ವಾಶ್ ರೂಮಿಗೆ ಹೋಗುತ್ತಿದ್ದು, ಅನುಮಾನಗೊಂಡ ವಧು ಈ ಕುರಿತು ಪತ್ತೆ ಹಚ್ಚಿದಾಗ ಸತ್ಯ ಸಂಗತಿ ಬಹಿರಂಗವಾಗಿ ಬೆಚ್ಚಿಬಿದ್ದಿದ್ದಾಳೆ.
ಟೀಲಾ ಮೋಡ್ ಪೊಲೀಸ್ ಠಾಣಾ ವ್ಯಾಪ್ತಿಯ ಸಿಂಕರ್‌ಪುರ ರಸ್ತೆಯಲ್ಲಿರುವ ಬ್ಯಾಂಕ್ವೆಟ್ ಹಾಲ್‌ನಲ್ಲಿ ಮದುವೆಯ ಅಂತಿಮ ವಿಧಿವಿಧಾನ ಪೂರ್ಣಗೊಳ್ಳುವ ಮುನ್ನ ವರ ಮಾದಕ ದ್ರವ್ಯ ಸೇವಿಸಿ ಸಿಕ್ಕಿಬಿದ್ದಿದ್ದಾನೆ. ಇದು ಮದುವೆ ಸಮಾರಂಭದಲ್ಲಿ ಗದ್ದಲಕ್ಕೆ ಕಾರಣವಾಗಿದ್ದು, ಅಂತಿಮವಾಗಿ ಮದುವೆ ರದ್ದುಗೊಳಿಸಿ ವರ ಮತ್ತಾತನ ಕುಟುಂಬಸ್ಥರನ್ನು ವಾಪಸ್ ಕಳುಹಿಸಲಾಗಿದೆ. ಸಂಬಂಧಿಕರ ದೂರಿನ ಮೇರೆಗೆ ಪೊಲೀಸರು ವರ, ಆತನ ಸಹೋದರ, ಸಹೋದರಿ ಮತ್ತು ಚಿಕ್ಕಪ್ಪನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ನವೆಂಬರ್ 27 ರಂದು ಗಾಂಧಿನಗರದ ಯುವಕನೊಂದಿಗೆ ಮಗಳ ಮದುವೆ ನಿಶ್ಚಯವಾಗಿತ್ತು ಎಂದು ವಧುವಿನ ತಾಯಿ ತಿಳಿಸಿದ್ದಾರೆ. 2.5 ಲಕ್ಷಕ್ಕೆ ಬ್ಯಾಂಕ್ವೆಟ್ ಹಾಲ್ ಬುಕ್ ಮಾಡಿದ್ದರು. ಸುಮಾರು 450 ಮಂದಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ವರ ಮೆರವಣಿಗೆಯೊಂದಿಗೆ ಬ್ಯಾಂಕ್ವೆಟ್ ಹಾಲ್ ತಲುಪಿದ್ದು, ವಿಧಿವಿಧಾನದ ಪ್ರಕಾರ ವರನಿಗೆ ಚಿನ್ನದ ಸರ, ಚಿನ್ನದ ಉಂಗುರ, ಸ್ಮಾರ್ಟ್ ವಾಚ್ ಹಾಗೂ 51 ಸಾವಿರ ರೂ. ನೀಡಿ ಮಾಲೆ ವಿನಿಮಯಕ್ಕೆ ಸಿದ್ಧತೆ ಆರಂಭವಾಗಿತ್ತು. ಈ ವೇಳೆ ವರ ಇದ್ದಕ್ಕಿದ್ದಂತೆ ಕಣ್ಮರೆಯಾಗಿದ್ದ.
ಆತನನ್ನು ಹುಡುಕಿದಾಗ, ತನ್ನ ಸ್ನೇಹಿತರೊಂದಿಗೆ ವೇದಿಕೆಯ ಹಿಂದೆ ಮಾದಕ ಮಾತ್ರೆ ಸೇವಿಸುತ್ತಿರುವುದು ಕಂಡು ಬಂದಿದೆ. ಇದಕ್ಕೂ ಮುನ್ನ ಪದೇ ಪದೇ ವಾಶ್ ರೂಮಿಗೆ ಹೋಗಿದ್ದು, ಇದಕ್ಕೆ ಸಮರ್ಥನೆ ಕೊಡಲು ಪ್ರಾರಂಭಿಸಿದ್ದ. ಮದುಮಗನ ಹಾವಭಾವ ಆತ ನಶೆಯಲ್ಲಿದ್ದಂತೆ ತೋರಿದ್ದು, ಇದಾದ ಬಳಿಕ ಮದುವೆಗೆ ಸಿದ್ಧತೆ ಆರಂಭವಾದಾಗ ಮತ್ತೆ ತಲೆಮರೆಸಿಕೊಂಡು ಅಮಲು ಮಾತ್ರೆ ಸೇವಿಸಿದ್ದಾನೆ.
ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ವರನ ಕಡೆಯವರು ವರದಕ್ಷಿಣೆಯಾಗಿ 10 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದರು ಎಂದು ಸಂಬಂಧಿಕರು ಆರೋಪಿಸಿದ್ದಾರೆ. ಮದುವೆ ರದ್ದುಗೊಳಿಸಿ ವರ ಮತ್ತಾತನ ಕುಟುಂಬಸ್ಥರನ್ನು ವಾಪಸ್ ಕಳುಹಿಸಲಾಗಿದೆ. ಮದುವೆಗಾಗಿ 15 ಲಕ್ಷ ರೂಪಾಯಿ ಸಾಲ ಮಾಡಿರುವುದಾಗಿ ವಧುವಿನ ತಾಯಿ ತಿಳಿಸಿದ್ದಾರೆ. ದೂರು ಆಧರಿಸಿ ಪೊಲೀಸರು ವರದಿ ದಾಖಲಿಸಿಕೊಂಡಿದ್ದು, ವರದಕ್ಷಿಣೆ ಕಿರುಕುಳದ ಆರೋಪವೂ ಇದೆ. ಈ ಕುರಿತು ತನಿಖೆ ನಡೆಸಲಾಗುತ್ತಿದೆ.