ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಂತಕರಲ್ಲಿ ಒಬ್ಬನಾದ ಎಜಿ ಪೆರಾರಿವಾಳನ್‌ಗೆ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ಜೀವ ಇರುವವರೆಗೂ ಜೈಲಿನಲ್ಲಿ ಇರುವ ಶಿಕ್ಷೆಗೆ ಗುರಿಯಾಗಿದ್ದ ಪೆರಾರಿವಾಳನ್‌ಗೆ ಈಗ ಮದುವೆ ಮಾಡಲು ಆತನ ತಾಯಿ ಅರ್ಪುತಮ್ಮಾಳ್ ಪ್ಲಾನ್ ಮಾಡಿದ್ದಾರೆ.
“ನಾನು ಅದಾಗಲೇ ಮನೆ ಮತ್ತು ಜೈಲುಗಳ ನಡುವೆ ಅಡ್ಡಾಡಿಕೊಂಡು ಜೀವನ ತಳ್ಳುತ್ತಿರುವ ನಡುವೆ ಮತ್ತೊಂದು ಹೆಂಗಸಿಗೂ ಸಹ ಈ ತಾಪತ್ರಯ ಕೊಡಲು ತನಗೆ ಇಷ್ಟವಿಲ್ಲದ ಕಾರಣ ತನಗೆ ಮದುವೆ ಮೇಲೆ ಆಸಕ್ತಿ ಇಲ್ಲವೆಂದು ನನ್ನ ಪುತ್ರ ಈ ಮುಂಚೆ ಹೇಳಿದ್ದ. ಆದರೆ ಈಗ ಪರಿಸ್ಥಿತಿ ಬದಲಾದ ಕಾರಣ ಮುಂದಿನ ಹೆಜ್ಜೆ ಇಡಲು ಸಿದ್ಧರಾಗಿದ್ದೇವೆ” ಎಂದಿದ್ದಾರೆ ಅರ್ಪುತಮ್ಮಾಳ್.
ಪೆರಾರಿವಾಳನ್ ಕಳೆದ 30 ವರ್ಷಗಳಿಂದ ಜೈಲಿನಲ್ಲಿ ಇದ್ದಾನೆ. ಈತನ ಬಿಡುಗಡೆಗೆ ಕೋರಿ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್‌ರನ್ನು ಮೇ 28, 2021ರಲ್ಲಿ ಭೇಟಿಯಾಗಿದ್ದರು ಅರ್ಪುತಮ್ಮಾಳ್.
ತನ್ನ ಪುತ್ರನಿಗೆ ಬ್ಲಾಡರ್ ಸೋಂಕಿರುವ ಕಾರಣ ಆತನ ಚಿಕಿತ್ಸೆಗೆ ವ್ಯವಸ್ಥೆ ಮಾಡಿಕೊಡಲು ಅರ್ಪುತಮ್ಮಾಳನ್ ಕೇಳಿಕೊಂಡಿದ್ದರು. ಆಕೆಯ ಮನವಿಯನ್ನು ಪೂರೈಸಿದ ತಮಿಳುನಾಡು ಸರ್ಕಾರ ಪೆರಾರಿವಾಳನ್‌ಗೆ 30 ದಿನಗಳ ಪೆರೋಲ್ ಕೊಟ್ಟಿದ್ದಲ್ಲದೇ ಅದನ್ನು ಇನ್ನೂ 30 ದಿನಗಳ ಮಟ್ಟಿಗೆ ವಿಸ್ತರಿಸಿತ್ತು. ಜೀವ ಇರುವವರೆಗೂ ಜೈಲು ಶಿಕ್ಷೆ ವಿರುದ್ಧ ಪೆರಾರಿವಾಳನ್ ಸಲ್ಲಿಸಿರುವ ಮೇಲ್ಮನವಿ ಸದ್ಯ ರಾಷ್ಟ್ರಪತಿ ಅಂಗಳದಲ್ಲಿದೆ.
“ಇದು 31 ವರ್ಷಗಳ ಹೋರಾಟವಾಗಿದ್ದು, ನನ್ನೊಂದಿಗಿರುವ ಎಲ್ಲರಿಗೂ ಧನ್ಯವಾದ ತಿಳಿಸಲು ಬಯಸುವೆ. ತಮಿಳುನಾಡು ಸರ್ಕಾರ ಕೊಟ್ಟ ರಜೆಯಿಂದಾಗಿ ನನ್ನ ಪುತ್ರ ಚೇತರಿಕೆ ಕಂಡಿದ್ದಾನೆ. ಮನುಷ್ಯನ ಜೀವನದಲ್ಲಿ 31 ವರ್ಷ ಎಂದರೆ ಎಷ್ಟು ಸುದೀರ್ಘ ಎಂದು ಎಲ್ಲರಿಗೂ ಗೊತ್ತಿದೆ. ತನ್ನ ಒಳ್ಳೆಯ ನಡತೆಯ ಕಾರಣ ಆತ ಈ ಜಾಮೀನು ಪಡೆದಿದ್ದಾನೆ” ಎಂದು ಅರ್ಪುತಮ್ಮಾಳ್ ತಿಳಿಸಿದ್ದಾರೆ.
ಪ್ರಕರಣ ಸಂಬಂಧ 1999ರ ಮೇ ತಿಂಗಳ ತನ್ನ ಆದೇಶದಲ್ಲಿ ಪೆರಾರಿವಾಳನ್ ಜೊತೆಗೆ ರಾಜೀವ್ ಹತ್ಯೆ ಇತರ ಆರೋಪಿಗಳಾದ ಮುರುಗನ್, ಸಂತಂ ಹಾಗೂ ನಳಿನಿಗೆ ಕೊಟ್ಟಿದ್ದ ಮರಣ ದಂಡನೆಯ ಶಿಕ್ಷೆಯನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿತ್ತು.