ಮಹಿಳೆಯನ್ನು ಕೊಂದಾತನನ್ನು ಜನರು ಜೀವಂತವಾಗಿ ಸುಟ್ಟುಹಾಕಿದ ಪ್ರಸಂಗ ಅಸ್ಸಾಂನಲ್ಲಿ ನಡೆದಿದೆ. ನಾಗೋನ್ನ ಬೋರ್ ಲಾಲುಂಗ್ ಪ್ರದೇಶದಲ್ಲಿ ಸಾರ್ವಜನಿಕ ವಿಚಾರಣೆಯ ಸಂದರ್ಭದಲ್ಲಿ ರಂಜೀತ್ ಬೊರ್ಡೊಲೊಯ್ ಎಂಬ ವ್ಯಕ್ತಿಯನ್ನು ಜೀವಂತವಾಗಿ ಸುಟ್ಟುಹಾಕಲಾಗಿದೆ.
ಸಾರ್ವಜನಿಕ ವಿಚಾರಣೆಯಲ್ಲಿ, ಕೊಲೆಯ ಅಪರಾಧಿ ಎಂದು ಸಾಬೀತಾದ ನಂತರ ವ್ಯಕ್ತಿಗೆ ಜನರೇ ಶಿಕ್ಷೆಕೊಟ್ಟರು. ನಂತರ ಅವನ ದೇಹವನ್ನು ಹೂಳಲಾಯಿತು. ಈ ಘಟನೆ ಬಗ್ಗೆ ನಮಗೆ ಸಂಜೆ 6 ಗಂಟೆಗೆ ಮಾಹಿತಿ ಸಿಕ್ಕಿತು. ಮೃತದೇಹವನ್ನು ಅಗೆದು ತೆಗೆದು ಕೆಲವರನ್ನು ವಶಕ್ಕೆ ಪಡೆಯಲಾಗಿತ್ತು. ದೇಹ ಶೇ.90ರಷ್ಟು ಸುಟ್ಟಿದ್ದು ಕಂಡುಬಂತು ಎಂದು ಪೊಲೀಸರು ತಿಳಿಸಿದ್ದಾರೆ.
ಕಬಿರ್ ಬುಡಕಟ್ಟು ಜನಾಂಗದ ಪ್ರಾಬಲ್ಯವಿರುವ ಗ್ರಾಮದ ಸ್ಥಳೀಯರೊಬ್ಬರ ಪ್ರಕಾರ, ಮೂರು ದಿನಗಳ ಹಿಂದೆ ಗ್ರಾಮದ ಕೆರೆಯಲ್ಲಿ ನವವಿವಾಹಿತ ಮಹಿಳೆಯ ಶವ ಪತ್ತೆಯಾಗಿತ್ತು. ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ಮಹಿಳೆಯೊಬ್ಬರು ಶಂಕೆ ವ್ಯಕ್ತಪಡಿಸಿದ್ದರು, ಶನಿವಾರ ಸಮುದಾಯದ ಸಭೆ ಇತ್ತು, ಅಲ್ಲಿ ಆಕೆಯನ್ನು ಕರೆದು ಘಟನೆಯ ಬಗ್ಗೆ ಪ್ರಶ್ನಿಸಲಾಯಿತು. ಐದು ಮಂದಿ ಕೊಲೆಗೆ ಪ್ರಯತ್ನಿಸಿದ್ದಾಗಿ ಆಕೆ ಹೇಳಿದ್ದಳು.
ರಂಜಿತ್ ಬೊರ್ಡೊಲೊಯ್ ಕತ್ತು ಹಿಸುಕಿ ಕೊಂದಿದ್ದಾನೆ ಎಂಬುದು ಈ ವೇಳೆ ಶಂಕೆ ವ್ಯಕ್ತವಾಯಿತು. ನಂತರ, ಬೋರ್ಡಲೋಯ್ನನ್ನು ಸಭೆಗೆ ಎಳೆದು ತರಲಾಯಿತು, ಅಲ್ಲಿ ಆತ ತನ್ನ ಅಪರಾಧ ಒಪ್ಪಿಕೊಂಡ. ಇದರಿಂದ ಕುಪಿತಗೊಂಡ ಕೆಲವರು ಆತನಿಗೆ ಥಳಿಸಲು ಆರಂಭಿಸಿದರೆ ಇನ್ನು ಕೆಲವರು ಆತನ ಮೇಲೆ ಸೀಮೆಎಣ್ಣೆ ಸುರಿದು ಸಜೀವ ದಹನ ಮಾಡಿದ್ದಾರೆ. ಬಳಿಕ ಆತನ ಶವವನ್ನು ಹೂಳಲಾಯಿತು. ಹತ್ಯೆಯಾದ ವ್ಯಕ್ತಿ ಆ ಮಹಿಳೆಯನ್ನು ಏಕೆ ಕೊಂದ ಎಂಬುದು ಇನ್ನೂ ಖಚಿತವಾಗಿಲ್ಲ.