ನವದೆಹಲಿ: ದೆಹಲಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಕೆಲವು ದಿನಗಳ ನಂತರ ಅರವಿಂದರ್ ಸಿಂಗ್ ಲವ್ಲಿ ಶನಿವಾರ ಭಾರತೀಯ ಜನತಾ ಪಕ್ಷಕ್ಕೆ ಸೇರಿದ್ದಾರೆ.
ಬಿಜೆಪಿ ಪ್ರಧಾನ ಕಚೇರಿಯಲ್ಲಿ ನಡೆದ ಸಭೆಯಲ್ಲಿ ದೆಹಲಿಯ ಮಾಜಿ ಕಾಂಗ್ರೆಸ್ ಮುಖ್ಯಸ್ಥರು, ನಾಲ್ವರು ಮಾಜಿ ಕಾಂಗ್ರೆಸ್ ನಾಯಕರೊಂದಿಗೆ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾದರು. ಪಕ್ಷಕ್ಕೆ ಸೇರ್ಪಡೆಯಾದ ಇತರ ನಾಲ್ವರಲ್ಲಿ ಮಾಜಿ ಕಾಂಗ್ರೆಸ್ ಶಾಸಕರಾದ ರಾಜ್‌ಕುಮಾರ್ ಚೌಹಾಣ್, ನೀರಜ್ ಬಸೋಯಾ ಮತ್ತು ನಸೀಬ್ ಸಿಂಗ್ ಮತ್ತು ದೆಹಲಿ ಯುವ ಕಾಂಗ್ರೆಸ್ ಮುಖ್ಯಸ್ಥ ಅಮಿತ್ ಮಲಿಕ್ ಸೇರಿದ್ದಾರೆ.
ಬಿಜೆಪಿಗೆ ಸೇರ್ಪಡೆಗೊಂಡ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅರವಿಂದರ್ ಸಿಂಗ್ ಲವ್ಲಿ, ‘ಬಿಜೆಪಿಯ ಬ್ಯಾನರ್‌ನಲ್ಲಿ ಮತ್ತು ಪ್ರಧಾನಿ ನೇತೃತ್ವದಲ್ಲಿ ದೆಹಲಿಯ ಜನರಿಗಾಗಿ ಹೋರಾಡಲು ನಮಗೆ ಅವಕಾಶ ನೀಡಲಾಗಿದೆ. ನನಗೆ ಸಂಪೂರ್ಣ ಭರವಸೆ ಇದೆ. ದೇಶದಲ್ಲಿ ಬಿಜೆಪಿ ಸರ್ಕಾರ ಪ್ರಚಂಡ ಬಹುಮತದೊಂದಿಗೆ ರಚನೆಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ, ಮುಂದಿನ ದಿನಗಳಲ್ಲಿ ದೆಹಲಿಯಲ್ಲೂ ಬಿಜೆಪಿ ಬಾವುಟ ಹಾರಲಿದೆ ಎಂದು ಹೇಳಿದ್ದಾರೆ.
ಏಪ್ರಿಲ್ 28 ರಂದು ಲವ್ಲಿ ಅವರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು. ಆರಂಭದಲ್ಲಿ ಅವರು ಯಾವುದೇ ರಾಜಕೀಯ ಪಕ್ಷಕ್ಕೆ ಸೇರುವುದಿಲ್ಲ ಎಂದು ಹೇಳಿದ್ದರು. ಇಂದು ಬಿಜೆಪಿಗೆ ಸೇರಿದ್ದಾರೆ.
ಬಿಜೆಪಿ ಸೇರ್ಪಡೆ ಲವ್ಲಿಗೆ ಇದು ಮೊದಲೇನಲ್ಲ. ಇದಕ್ಕೂ ಮೊದಲು, ಅವರು ಪಕ್ಷದ ದೆಹಲಿ ಮುಖ್ಯಸ್ಥ ಸ್ಥಾನವನ್ನು ತೊರೆದು 2017 ರಲ್ಲಿ ಬಿಜೆಪಿ ಸೇರಿದರು, ಆದರೆ ಒಂಬತ್ತು ತಿಂಗಳ ನಂತರ ಕಾಂಗ್ರೆಸ್‌ಗೆ ಮರಳಿದ್ದರು.