ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಪರಿಸರ ಸಚಿವ ಗೋಪಾಲ್ ರೈ ಭಾನುವಾರ ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ ಅವರೊಂದಿಗೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ನಿರಾಕರಿಸಿದ ಪ್ರಸಂಗ ನಡೆದಿದೆ.
ಅಧಿಕಾರಿಗಳ ಪ್ರಕಾರ ಈ ಹಿಂದೆ ಕಾರ್ಯಕ್ರಮದ ಬ್ಯಾನರ್ ಮತ್ತು ಪೋಸ್ಟರ್‌ಗಳಲ್ಲಿ ಲೆಫ್ಟಿನೆಂಟ್ ಗೌರ್ನರ್, ಸಿಎಂ ಫೋಟೋ ಮಾತ್ರ ಇತ್ತು. ಕೊನೆಯ ಕ್ಷಣದಲ್ಲಿ ವೇದಿಕೆಯ ಮೇಲಿನ ಹೋರ್ಡಿಂಗ್ ಅನ್ನು ಬದಲಾಯಿಸಿ, ಪ್ರಧಾನಿ ನರೇಂದ್ರ ಮೋದಿಯವರ ಫೋಟೋವನ್ನು ಸೇರಿಸಲಾಯಿತು.
ಪರಿಸರ ಮತ್ತು ಅರಣ್ಯ ಇಲಾಖೆಯು ವನಮಹೋತ್ಸವವನ್ನು ಆಯೋಜಿಸಿತ್ತು. ಕಾರ್ಯಕ್ರಮ ಪಟ್ಟಿಯ ಪ್ರಕಾರ, ಲೆಫ್ಟಿನೆಂಟ್ ಗೌರ್ನರ್, ಸಿಎಂ ಮತ್ತು ಗೋಪಾಲ್ ರೈ ಹಾಜರಾಗಬೇಕಿತ್ತು. ಈ ಬ್ಯಾನರ್ ವಾರ್ ತೀವ್ರ ಮಟ್ಟಕ್ಕೆ ತಲುಪಿ, ಕೊನೆಗೆ ರಾಜಕೀಯಗೊಳಿಸಲಾಗುತ್ತಿದೆ ಎಂದು ಆರೋಪಿಸಿ ಕೇಜ್ರಿವಾಲ್ ಕಾರ್ಯಕ್ರಮಕ್ಕೆ ಗೈರಾದರು.
ಪ್ರಧಾನಿ ಕಾರ್ಯಾಲಯವು ದೆಹಲಿ ಪೊಲೀಸ್ ಅಧಿಕಾರಿಗಳನ್ನು ವೇದಿಕೆ “ಹೈಜಾಕ್” ಮಾಡಲು ಕಳುಹಿಸಿದೆ ಎಂದು ಎಎಪಿ ನಾಯಕರು ಆರೋಪಿಸಿದರು.
ಕಾರ್ಯಕ್ರಮದ ಪ್ರಕಾರ, ಬ್ಯಾನರ್ ಅನ್ನು ಎಲ್ಇಡಿ ಪರದೆಯಲ್ಲಿ ಫ್ಲ್ಯಾಷ್ ಮಾಡುವುದು, ನಂತರ ಮಕ್ಕಳಿಗೆ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಆದರೆ ಎಲ್ ಇ ಡಿ ಯಲ್ಲಿ ಬ್ಯಾನರ್ ಹಾಕಲಾಗಿತ್ತು ಎಂದು ಆರೋಪಿಸಲಾಗಿದೆ.
ಬ್ಯಾನರ್‌ಗಳ ಅಂತಿಮ ವಿನ್ಯಾಸವನ್ನು ಗುರುವಾರ ಸರ್ಕಾರಕ್ಕೆ ಕಳುಹಿಸಲಾಗಿತ್ತು ಎಂದು ಲೆಫ್ಟಿನೆಂಟ್ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ.
ದೆಹಲಿ ಸರ್ಕಾರದ ಅಧಿಕಾರಿಯೊಬ್ಬರು ಕೂಡ ಈ ಸಂಗತಿ ದೃಢಪಡಿಸಿದ್ದು, ಅಂತಿಮ ವಿನ್ಯಾಸವು ಪ್ರಧಾನ ಮಂತ್ರಿಯ ಫೋಟೋವನ್ನು ಒಳಗೊಂಡಿರಲಿಲ್ಲ ಎಂದು ಹೇಳಿದ್ದಾರೆ.
ಎರಡು ತಿಂಗಳ ಹಿಂದೆ ಹೊಸ ಲೆಫ್ಟಿನೆಂಟ್ ಗೌರ್ನರ್ ಅಧಿಕಾರ ವಹಿಸಿಕೊಂಡ ನಂತರ ಲೆಫ್ಟಿನೆಂಟ್ ಕಚೇರಿ ಮತ್ತು ದೆಹಲಿ ಸರ್ಕಾರದ ನಡುವೆ ಒಂದೊಂದೇ ತಿಕ್ಕಾಟ ಶುರುವಾಗಿದೆ.