ಗುಜರಾತ್ನ ಸರ್ಕಾರಿ ಶಾಲೆಗಳಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಮತ್ತು ಗುಣಮಟ್ಟದ ಶಿಕ್ಷಣ ನೀಡುವುದಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಘೋಷಿಸಿದ್ದಾರೆ.
ಕಚ್ ಜಿಲ್ಲೆಯ ಭುಜ್ ನಲ್ಲಿರುವ ಟೌನ್ ಹಾಲ್ ನಲ್ಲಿ ಜನರನ್ನುದ್ದೇಶಿಸಿ ಮಾತನಾಡಿದ ಅವರು ಮುಂಬರುವ ವಿಧಾನಸಭಾ ಚುನಾವಣೆಗೆ ಮುನ್ನ ಚುನಾವಣಾ ಪೂರ್ವ ಭರವಸೆಯಾಗಿ ಉಚಿತ ಶಿಕ್ಷಣದ ಬಗ್ಗೆ ಭರವಸೆ ನೀಡಿದ್ದಾರೆ.
ಗುಜರಾತ್ನಲ್ಲಿ ಜನಿಸಿದ ಎಲ್ಲರಿಗೂ ಉಚಿತ ಮತ್ತು ಗುಣಮಟ್ಟದ ಶಿಕ್ಷಣ ಸಿಗುತ್ತದೆ. ನಾವು ಅತ್ಯುತ್ತಮ ಶಿಕ್ಷಣವನ್ನು ಉಚಿತವಾಗಿ ನೀಡುತ್ತೇವೆ. ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಅಸ್ತಿತ್ವದಲ್ಲಿರುವ ಸರ್ಕಾರಿ ಶಾಲೆಗಳ ಮೂಲಸೌಕರ್ಯಗಳನ್ನು ಸುಧಾರಿಸಲಾಗುವುದು. ರಾಜ್ಯಾದ್ಯಂತ ಹೆಚ್ಚಿನ ಸಂಖ್ಯೆಯ ಹೊಸ ಶಾಲೆಗಳನ್ನು ಸ್ಥಾಪಿಸುವುದಾಗಿ ಭರವಸೆ ನೀಡಿದರು.
ಗುಜರಾತ್ನಲ್ಲಿ ಎಎಪಿ ಮುಂದಿನ ಸರ್ಕಾರವನ್ನು ರಚಿಸಿದರೆ, ಎಲ್ಲಾ ಖಾಸಗಿ ಶಾಲೆಗಳನ್ನು ಆಡಿಟ್ ಮಾಡಲಾಗುವುದು. ದೆಹಲಿಯಲ್ಲಿ ಮಾದರಿಯಲ್ಲಿ ಪೋಷಕರಿಂದ ಸಂಗ್ರಹಿಸಿದ “ಹೆಚ್ಚುವರಿ ಹಣವನ್ನು” ಹಿಂದಿರುಗಿಸಲಾಗುವುದು ಎಂದು ಅವರು ಹೇಳಿದರು.
ಗುಜರಾತ್ ನಲ್ಲಿ ಎಎಪಿ ಸರ್ಕಾರ ರಚಿಸಿದರೆ, ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರ ಸೇವೆ ಕಾಯಂಗೊಳಿಸಲಾಗುವುದು. ಅವರಿಗೆ ಉದ್ಯೋಗ ಭದ್ರತೆ ನೀಡಲಾಗುವುದು. ಸರ್ಕಾರಿ ಶಾಲಾ ಶಿಕ್ಷಕರಿಗೆ ಬೋಧಕೇತರ ಕೆಲಸಗಳನ್ನು ವಹಿಸುವುದಿಲ್ಲ ಎಂದರು.
ಕೇಜ್ರಿವಾಲ್ ಅವರು ತಮ್ಮ ಹಿಂದಿನ ಗುಜರಾತ್ ಭೇಟಿ ಸಂದರ್ಭದಲ್ಲಿ ವಿದ್ಯುತ್, ಉದ್ಯೋಗಗಳು, ನಿರುದ್ಯೋಗ ಭತ್ಯೆ, ಮಹಿಳೆಯರು ಮತ್ತು ಬುಡಕಟ್ಟು ಜನಾಂಗದವರಿಗೆ ಸಂಬಂಧಿಸಿದ ಯೋಜನೆ ಜಾರಿ ಬಗ್ಗೆ ಘೋಷಿಸಿದ್ದರು.