ವಿಧಾನ ಸಭಾ ಚುನಾವಣೆ ಎದುರು ನೋಡುತ್ತಿರುವ ಪಂಜಾಬ್ಗೆ ಭೇಟಿ ಕೊಟ್ಟಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಅಲ್ಲಿ ವಿಶೇಷವಾದ ಭೋಜನಕೂಟದಲ್ಲಿ ತಾವು ಭಾಗಿಯಾದ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಪಂಜಾಬ್ಗೆ ತೆರಳಿದ್ದ ಸಂದರ್ಭದಲ್ಲಿ ಆಟೋ ಚಾಲಕರೊಬ್ಬರು ತಮ್ಮನ್ನು ಭೋಜನಕ್ಕೆ ಆಹ್ವಾನಿಸಿದ್ದರು ಎಂದು ಕೇಜ್ರಿವಾಲ್ ತಿಳಿಸಿದ್ದಾರೆ. ರಿಕ್ಷಾ ಚಾಲಕನ ಮನೆಯಲ್ಲಿ ಭೋಜನ ಕೂಟದಲ್ಲಿ ಭಾಗಿಯಾಗಿದ್ದು ಮಾತ್ರವಲ್ಲ ಕೇಜ್ರಿವಾಲ್ ಆಟೋ ರಿಕ್ಷಾದಲ್ಲಿ ಸವಾರಿಯನ್ನು ಸಹ ಮಾಡಿ ಬಂದಿದ್ದಾರೆ.
ಲುಧಿಯಾನಾದ ಆಟೋ-ಚಾಲಕ ದಿಲೀಪ್ ತಿವಾರಿ ಕೇಜ್ರಿವಾಲ್ಗೆ ಭೋಜನ ಆಯೋಜಿಸಿದ್ದರು.
“ದಿಲೀಪ್ ತಿವಾರಿ ಹಾಗೂ ಅವರ ಕುಟುಂಬ ಹೃತ್ಪೂರ್ವಕವಾಗಿ ನಮಗೆ ಊಟ ಬಡಿಸಿದರು. ಊಟ ಬಹಳ ಚೆನ್ನಾಗಿತ್ತು. ಅಂಥ ರುಚಿಕರ ಆಹಾರವನ್ನು ನಮಗೆ ಉಣಬಡಿಸಿದ ಅವರ ಕುಟುಂಬಕ್ಕೆ ಧನ್ಯವಾದ ತಿಳಿಸಲು ಬಯಸುತ್ತೇನೆ. ದೆಹಲಿಯಲ್ಲಿರುವ ನಮ್ಮ ಮನೆಗೆ ಬಂದು ಆತಿಥ್ಯ ಸ್ವೀಕರಿಸಲು ನಾನು ಅವರನ್ನು ಆಹ್ವಾನಿಸಿದ್ದೇನೆ,” ಎಂದು ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.
“ಕೇಜ್ರಿವಾಲ್ಜೀ ನಮ್ಮ ಮನೆಗೆ ಬಂದಿದ್ದರು ಎಂಬುದು ಕನಸಿನಂತೆ ಭಾಸವಾಗುತ್ತಿದೆ. ನನಗೆ ಈ ಬಗ್ಗೆ ಬಹಳ ಖುಷಿ ಇದೆ. ನನಗೆ ಆಗುತ್ತಿರುವ ಭಾವವನ್ನು ವಿವರಿಸಲು ನನ್ನಲ್ಲಿ ಪದಗಳಿಲ್ಲ,” ಎಂದು ತಿವಾರಿ ತಿಳಿಸಿದ್ದಾರೆ.