ಗುಜರಾತ್ ವಿಧಾನಸಭಾ ಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗಿದ್ದು, ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಆಮ್ ಆದ್ಮಿ ಪಕ್ಷ(ಎಎಪಿ) ಜಯಗಳಿಸಿದೆ. ಈ ಮೂಲಕ ಆಮ್ ಆದ್ಮಿ ಪಾರ್ಟಿ ರಾಷ್ಟ್ರೀಯ ಪಕ್ಷವಾಗಿದೆ.
ಪಕ್ಷದ ಮುಖ್ಯಸ್ಥ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು, ಆಮ್ ಆದ್ಮಿ ಪಾರ್ಟಿ ರಾಷ್ಟ್ರೀಯ ಪಕ್ಷವಾಗಲು ಕಾರಣರಾದ ಗುಜರಾತ್ ಜನರಿಗೆ ಮತ್ತು ಪಕ್ಷದ ಕಾರ್ಯಕರ್ತರಿಗೆ ಧನ್ಯವಾದ ಅರ್ಪಿಸಿದ್ದಾರೆ.
ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಎಎಪಿ ಪಡೆದಿರುವ ಮತಗಳ ಸಂಖ್ಯೆಯನ್ನು ಗಮನಿಸಿದರೆ, ಕಾನೂನಿನ ಪ್ರಕಾರ ಎಎಪಿ ರಾಷ್ಟ್ರೀಯ ಪಕ್ಷ ಎಂದು ಕರೆದರೆ ಸಾಕು. ದೇಶದಲ್ಲಿ ಕೆಲವೇ ಕೆಲವು ಪಕ್ಷಗಳು ರಾಷ್ಟ್ರೀಯ ಪಕ್ಷದ ಸ್ಥಾನಮಾನವನ್ನು ಹೊಂದಿವೆ. ಈಗ, ಎಎಪಿ ಕೂಡ ಆ ಬೆರಳೆಣಿಕೆಯ ರಾಷ್ಟ್ರೀಯ ಪಕ್ಷಗಳ ವರ್ಗಕ್ಕೆ ಸೇರುತ್ತದೆ ಎಂದು ಹೇಳಿದ್ದಾರೆ.
10 ವರ್ಷಗಳ ಹಿಂದೆ AAP ಅಸ್ತಿತ್ವಕ್ಕೆ ಬಂತು. ದೆಹಲಿ ಮತ್ತು ಪಂಜಾಬ್ ರಾಜ್ಯಗಳಲ್ಲಿ ಸರ್ಕಾರ ರಚಿಸಿದೆ. ದೆಹಲಿ, ಪಂಜಾಬ್ ಮತ್ತು ಗೋವಾದಲ್ಲಿ ಎಎಪಿ “ರಾಜ್ಯ ಪಕ್ಷ” ಎಂದು ಗುರುತಿಸಲ್ಪಟ್ಟಿದೆ.
ಒಂದು ಪಕ್ಷವು ನಾಲ್ಕು ರಾಜ್ಯಗಳಲ್ಲಿ “ರಾಜ್ಯ ಪಕ್ಷ” ಸ್ಥಾನಮಾನವನ್ನು ಪಡೆದರೆ, ಅದು ಸ್ವಯಂಚಾಲಿತವಾಗಿ “ರಾಷ್ಟ್ರೀಯ ಪಕ್ಷ” ಆಗುತ್ತದೆ. ನಿಯಮಗಳ ಪ್ರಕಾರ, ಒಂದು ರಾಜಕೀಯ ಪಕ್ಷವು ಮತದಾನದ ಶೇಕಡಾ 6 ರಷ್ಟು ಮತಗಳನ್ನು ಮತ್ತು ಶಾಸಕಾಂಗ ಸಭೆಯಲ್ಲಿ ಎರಡು ಸ್ಥಾನಗಳನ್ನು ಪಡೆದುಕೊಂಡರೆ “ರಾಜ್ಯ ಪಕ್ಷ” ಸ್ಥಾನಮಾನವನ್ನು ಪಡೆಯುತ್ತದೆ.
ರಾಷ್ಟ್ರೀಯ ಪಕ್ಷವಾದರೆ ದೇಶದಾದ್ಯಂತ ತನ್ನ ಅಭ್ಯರ್ಥಿಗಳಿಗೆ ಮೀಸಲು ಚಿಹ್ನೆಯನ್ನು ಪಡೆಯುತ್ತದೆ. ಸಾರ್ವತ್ರಿಕ ಚುನಾವಣೆಯ ಸಮಯದಲ್ಲಿ ಅಭ್ಯರ್ಥಿಗಳು ಸಾರ್ವಜನಿಕ ಪ್ರಸಾರಕರಾದ ದೂರದರ್ಶನ ಮತ್ತು ಆಲ್ ಇಂಡಿಯಾ ರೇಡಿಯೊದಲ್ಲಿ ಮೀಸಲಾದ ಪ್ರಸಾರ ಸ್ಲಾಟ್‌ಗಳನ್ನು ಪಡೆಯುತ್ತಾರೆ.
ಸಾರ್ವತ್ರಿಕ ಚುನಾವಣೆಯ ಸಂದರ್ಭದಲ್ಲಿ ಗರಿಷ್ಠ 40 ‘ಸ್ಟಾರ್ ಪ್ರಚಾರಕರು’ ಹೊಂದಬಹುದು. ಅದರ ರಾಷ್ಟ್ರೀಯ ಅಧ್ಯಕ್ಷರಿಗಾಗಿ ನವದೆಹಲಿಯಲ್ಲಿ ಸರ್ಕಾರಿ ಬಂಗಲೆ, ರಾಷ್ಟ್ರ ರಾಜಧಾನಿಯಲ್ಲಿ ಸಬ್ಸಿಡಿ ದರದಲ್ಲಿ ಕಚೇರಿ ಸ್ಥಳ ನೀಡಲಾಗುವುದು.
ಭಾರತದ ರಾಷ್ಟ್ರೀಯ ಪಕ್ಷಗಳ ಪಟ್ಟಿ
ಭಾರತೀಯ ಜನತಾ ಪಕ್ಷ (ಬಿಜೆಪಿ)
ಕಾಂಗ್ರೆಸ್ (INC)
ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ)
ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ-ಮಾರ್ಕ್ಸಿಸ್ಟ್ (ಸಿಪಿಐ-ಎಂ)
ಅಖಿಲ ಭಾರತ ತೃಣಮೂಲ ಕಾಂಗ್ರೆಸ್ (ಟಿಎಂಸಿ)
ಬಹುಜನ ಸಮಾಜ ಪಕ್ಷ (BSP)
ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (NCP)
ನ್ಯಾಷನಲ್ ಪೀಪಲ್ಸ್ ಪಾರ್ಟಿ (NPP)