ನಿನ್ನೆ ಪಂಜಾಬ್ ವಿಧಾನಸಭೆಯ ಸಿಎಂ ಅಭ್ಯರ್ಥಿಯನ್ನ ಘೋಷಿಸಿದ್ದ ಆಮ್ ಆದ್ಮಿ ಪಾರ್ಟಿ ಇಂದು ಗೋವಾ ಚುನಾವಣೆಗೆ ಸಿಎಂ ಅಭ್ಯರ್ಥಿಯನ್ನ ಘೋಷಿಸಿದೆ. ಕಳೆದ ವರ್ಷ ಅಕ್ಟೋಬರ್ ನಲ್ಲಿ ಆಪ್ ಪಕ್ಷಕ್ಕೆ ಸೇರ್ಪಡೆಯಾಗಿರುವ ಅಮಿತ್ ಪಾಲೇಕರ್ ಗೋವಾ ರಾಜ್ಯದ ಸಿಎಂ ಅಭ್ಯರ್ಥಿ ಎಂದು ಅರವಿಂದ್ ಕೇಜ್ರಿವಾಲ್ ಪಣಜಿಯಲ್ಲಿ ತಿಳಿಸಿದ್ದಾರೆ. ಎಎಪಿ ಈ ಬಾರಿ ಗೋವಾದ ಎಲ್ಲಾ 40 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ. ಭಂಡಾರಿ ಸಮುದಾಯದ ಅಮಿತ್ ಸೆಂಟ್ ಕ್ರಜ಼್ ಕ್ಷೇತ್ರದ ಅಭ್ಯರ್ಥಿಯಾಗಿ ಚುನಾವಣೆ ಎದುರಿಸಲಿದ್ದಾರೆ.
ಅಮಿತ್ ಪಾಲೇಕರ್ ಅವರು, ಇತ್ತೀಚೆಗಷ್ಟೇ ಹಳೆ ಗೋವಾದ ಯುನೆಸ್ಕೊ ಸಂರಕ್ಷಿತ ನಿವೇಶನದಲ್ಲಿ ನಿರ್ಮಿಸಿರುವ ಶೈನಾ ಎನ್‌ಸಿ ಅಕ್ರಮ ಬಂಗಲೆ ವಿರುದ್ಧ ಉಪವಾಸ ಸತ್ಯಾಗ್ರಹ ನಡೆಸಿದ್ದರು.
ಬಂಡಾರಿ ಸಮುದಾಯದವರನ್ನ (ಒಬಿಸಿ ಸಮುದಾಯ) ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಆಯ್ಕೆ ಮಾಡುವುದಾಗಿ ಇತ್ತೀಚೆಗೆ ಆಪ್ ನಾಯಕರು ಭರವಸೆ ನೀಡಿದ್ದರು. ಪಾಲೇಕರ್ ಅವರ ಹೆಸರನ್ನು ಘೋಷಿಸುವ ಮೊದಲು, ಗೋವಾ ರಾಜ್ಯಕ್ಕೆ ಆಪ್ ಪಕ್ಷವು ಪ್ರಾಮಾಣಿಕ ವ್ಯಕ್ತಿಯನ್ನ ಆಯ್ಕೆ ಮಾಡಿದೆ. ಸಮುದಾಯದ ಕಲ್ಯಾಣ ಕಾರ್ಯಗಳಿಗೆ ಹೆಸರು ವಾಸಿಯಾದ ವ್ಯಕ್ತಿ ಅಮಿತ್. ಗೋವಾದ ಜನಸಂಖ್ಯೆಯಲ್ಲಿ ಭಂಡಾರಿ ಸಮುದಾಯವು ಶೇಕಡ 35% ಇದೆ. ಆದರೆ ರವಿನಾಯಕ್ ಬಿಟ್ಟರೆ ಇದುವರೆಗೂ ಯಾರೂ ಸಿಎಂ ಆಗಿಲ್ಲ. ನಾವು ಜಾತಿ ರಾಜಕಾರಣ ಮಾಡುತ್ತಿಲ್ಲ, ಇತರ ಪಕ್ಷಗಳು ಸಮುದಾಯದ ವಿರುದ್ಧ ರಾಜಕೀಯ ಮಾಡಿವೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.