ಇಟಾನಗರ: ಈಶಾನ್ಯ ರಾಜ್ಯ ಅರುಣಾಚಲ ಪ್ರದೇಶದ ಕಮೆಂಗ್ ನದಿಯು ಇದ್ದಕ್ಕಿದ್ದಂತೆ ನಿಗೂಢವಾಗಿ ಕಪ್ಪು ಬಣ್ಣಕ್ಕೆ ತಿರುಗಿದೆ. ಪರಿಣಾಮವಾಗಿ ಸಾವಿರಾರು ಮೀನುಗಳು ಸತ್ತು ತೇಲುತ್ತಿರುವುದನ್ನು ಕಂಡ ಸ್ಥಳೀಯ ನಿವಾಸಿಗಳು ಮತ್ತು ಅಧಿಕಾರಿಗಳಲ್ಲಿ ಭೀತಿ ಮೂಡಿಸಿದೆ.
ಘಟನೆಯ ನಂತರ, ಜನರು ಕಮೆಂಗ್ ನದಿಯ ಬಳಿ ಮೀನು ಹಿಡಿಯಲು ತೆರಳದಂತೆ ಜಿಲ್ಲಾಡಳಿತ ಸೂಚಿಸಿದೆ. ಮುಂದಿನ ಆದೇಶದವರೆಗೆ ಸತ್ತ ಮೀನುಗಳನ್ನು ಸೇವಿಸದಂತೆ ಹಾಗೂ ಮಾರಾಟ ಮಾಡದಂತೆ ಕೇಳಿಕೊಂಡಿದೆ.
ಕಮೆಂಗ್ ನದಿಯ ನೀರಿನ ಬಣ್ಣದಲ್ಲಿ ಹಠಾತ್ ಬದಲಾವಣೆ ಮತ್ತು ಹೆಚ್ಚಿನ ಪ್ರಮಾಣದ ಮೀನುಗಳ ಮಾರಣಹೋಮದ ಕಾರಣವನ್ನು ಕಂಡುಹಿಡಿಯಲು, ತಜ್ಞರ ಸಮಿತಿಯನ್ನು ರಚಿಸಬೇಕೆಂದು ಸೆಪ್ಪಾ ಪೂರ್ವ ಶಾಸಕ ತಪುಕ್ ಟಾಕು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಕಮೆಂಗ್ ನದಿಯಲ್ಲಿ ಈ ಘಟನೆ ಎಂದಿಗೂ ಸಂಭವಿಸಿಲ್ಲ ಎಂದು ಟಕು ಕಳವಳ ವ್ಯಕ್ತಪಡಿಸಿದ್ದಾರೆ. ಇನ್ನೂ ಕೂಡ ಇದೇ ರೀತಿ ಮುಂದುವರಿದರೆ ನದಿಯಿಂದ ಜಲಚರಗಳು ಸಂಪೂರ್ಣವಾಗಿ ನಿರ್ಮೂಲನೆಯಾಗುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಪ್ರಾಥಮಿಕ ಸಂಶೋಧನೆಗಳ ಪ್ರಕಾರ, ಒಟ್ಟು ಕರಗಿದ ವಸ್ತುಗಳ (ಟಿಡಿಎಸ್) ಹೆಚ್ಚಿನ ಅಂಶದಿಂದಾಗಿ ನದಿಯ ನೀರು ಕಪ್ಪು ಬಣ್ಣಕ್ಕೆ ತಿರುಗಿದೆ ಎಂದು ಜಿಲ್ಲಾ ಮೀನುಗಾರಿಕೆ ಅಭಿವೃದ್ಧಿ ಅಧಿಕಾರಿ (ಡಿಎಫ್‌ಡಿಒ) ಹಾಲಿ ತಾಜೋ ಹೇಳಿದ್ದಾರೆ. ನದಿಯ ನೀರಿನಲ್ಲಿ ಟಿಡಿಎಸ್ ನ ಅಂಶ ಹೆಚ್ಚಾದ್ದರಿಂದ ಜಲಚರ ಪ್ರಭೇದಗಳಿಗೆ ಉಸಿರಾಟದ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಇದರಿಂದ ಮೀನುಗಳ ಸಾವು ಸಂಭವಿಸಿರುವ ಸಾಧ್ಯತೆ ಇದೆ ಎಂದು ತಾಜೋ ಹೇಳಿದ್ದಾರೆ.