ಗುವಾಹಟಿ: ಅರುಣಾಚಲ ಪ್ರದೇಶದಲ್ಲಿ 6 ಬಾಲಕರು 15 ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಹಾಸ್ಟೆಲ್ ವಾರ್ಡನ್ ಗೆ ವಿಶೇಷ ನ್ಯಾಯಾಲಯದಿಂದ ಮರಣದಂಡನೆ ವಿಧಿಸಲಾಗಿದೆ. ದೇಶದಲ್ಲಿ ಪೋಕ್ಸೊ ಕಾಯ್ದೆಯಡಿ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಗೆ ಗರಿಷ್ಠ ಶಿಕ್ಷೆ ಮರಣದಂಡನೆ ವಿಧಿಸಿದ ಮೊದಲ ಪ್ರಕರಣ ಇದಾಗಿದೆ.
ವಾರ್ಡನ್ ಕೃತ್ಯವೆಸಗಿರುವುದು ಗೊತ್ತಿದ್ದರೂ ಯಾರಿಗೂ ತಿಳಿಸದೆ ಸುಮ್ಮನಿದ್ದ ಮುಖ್ಯ ಶಿಕ್ಷಕ ಹಾಗೂ ಹಿಂದಿ ಶಿಕ್ಷಕಿಗೆ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಲಾಗಿದೆ.
ಮರಣದಂಡನೆ ಶಿಕ್ಷೆಗೆ ಗುರಿಯಾದ ದೋಷಿ ವಾರ್ಡನ್ ಯುಮ್ಕೆನ್ ಬಾಗ್ರಾ ಎಂಬಾತ 2014 ರಿಂದ 2022ರ ಅವಧಿಯಲ್ಲಿ 21 ಅಪ್ರಾಪ್ತರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ. ವಿವಿಧ ಐಪಿಸಿ ಸೆಕ್ಷನ್ ಮತ್ತು ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದ ಎಸ್ಐಟಿ ಪೊಲೀಸರು ಸಮಗ್ರ ತನಿಖೆ ನಡೆಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಕೋರ್ಟ್ ಶಿಕ್ಷೆ ವಿಧಿಸಿದೆ.
2022 ರಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಮಕ್ಕಳು ನೀಡಿದ ಮಾಹಿತಿ ಆಧರಿಸಿ ಪೋಷಕರು ದೂರು ನೀಡಿದ್ದರು. ನಂತರ ಇತರೆ ಕೃತ್ಯಗಳು ಬೆಳಕಿಗೆ ಬಂದು ಸರ್ಕಾರ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ ರಚಿಸಿತ್ತು. 6ರಿಂದ 14 ವರ್ಷದ 21 ಮಕ್ಕಳ ಮೇಲೆ ವಾರ್ಡನ್ ದೌರ್ಜನ್ಯ ಎಸಗಿರುವುದು ತನಿಖೆಯಲ್ಲಿ ಗೊತ್ತಾಗಿತ್ತು. ಕೆಲವು ಮಕ್ಕಳು ಹಾಸ್ಟೆಲ್ ವಾರ್ಡನ್ ಬೆದರಿಕೆ, ದೌರ್ಜನ್ಯಕ್ಕೆ ಹೆದರಿ ಆತ್ಮಹತ್ಯೆಗೆ ಯತ್ನಿಸಿದ್ದರು.
ವಾರ್ಡನ್ ಯುಮ್ಕೆನ್ ಬಾಗ್ರಾಗೆ ಮರಣದಂಡನೆ ವಿಧಿಸಿದ ವಿಶೇಷ ನ್ಯಾಯಾಧೀಶ ಜಾವೆಪ್ಲು ಚಾಯ್, ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ(ಪೋಕ್ಸೊ) ಕಾಯ್ದೆಯಡಿ ಅಪರಾಧಕ್ಕೆ ಕುಮ್ಮಕ್ಕು ನೀಡಿದ ಮಾಜಿ ಮುಖ್ಯಶಿಕ್ಷಕ ಸಿಂಗ್ತುಂಗ್ ಯೋರ್ಪೆನ್ ಮತ್ತು ಹಿಂದಿ ಶಿಕ್ಷಕಿ ಮಾರ್ಬೊಮ್ ನ್ಗೊಮ್ದಿರ್ ಅವರಿಗೆ 20 ವರ್ಷಗಳ ಶಿಕ್ಷೆ ವಿಧಿಸಿದರು.