ಇಟಾನಗರ: ಅರುಣಾಚಲ ಸಿಎಂ ಸೇರಿದಂತೆ 10 ಬಿಜೆಪಿ ಅಭ್ಯರ್ಥಿಗಳು ವಿಧಾನಸಭೆ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದ 10 ಬಿಜೆಪಿ ಅಭ್ಯರ್ಥಿಗಳಲ್ಲಿ ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೆಮಾ ಖಂಡು ಮತ್ತು ಉಪ ಮುಖ್ಯಮಂತ್ರಿ ಚೌನಾ ಮೇನ್ ಸೇರಿದ್ದಾರೆ.
ಖಂಡು ಮತ್ತು ಇತರೆ ಒಂಬತ್ತು ಮಂದಿ ನಾಮಪತ್ರ ಹಿಂಪಡೆಯುವ ಅವಧಿ ಮುಕ್ತಾಯವಾದ ಹಿನ್ನೆಲೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಮುಖ್ಯ ಚುನಾವಣಾಧಿಕಾರಿ(ಸಿಇಒ) ಪವನ್ ಕುಮಾರ್ ಸೇನ್ ಶನಿವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ತವಾಂಗ್ ಜಿಲ್ಲೆಯ ಮುಕ್ತೋ ವಿಧಾನಸಭಾ ಕ್ಷೇತ್ರದಿಂದ ಖಂಡು ಮಾತ್ರ ನಾಮಪತ್ರ ಸಲ್ಲಿಸಿದ್ದು, ಉಪಮುಖ್ಯಮಂತ್ರಿ ಚೌನಾ ಮೇನ್ ಅವರು ತಮ್ಮ ಏಕೈಕ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಬಯಾಮ್ಸೊ ಕ್ರಿ ಶನಿವಾರ ನಾಮಪತ್ರ ಹಿಂಪಡೆದ ನಂತರ ಚೌಕಂ ಸ್ಥಾನವನ್ನು ಅವಿರೋಧವಾಗಿ ಗೆದ್ದಿದ್ದಾರೆ ಎಂದು ಅವರು ಹೇಳಿದರು.
ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಒಂದೇ ನಾಮಪತ್ರ ಸಲ್ಲಿಕೆಯಾಗಿದ್ದು, ಉಳಿದ ನಾಲ್ಕು ಕ್ಷೇತ್ರಗಳಲ್ಲಿ ವಿರೋಧ ಪಕ್ಷದ ಅಭ್ಯರ್ಥಿಗಳು ನಾಮಪತ್ರ ಹಿಂಪಡೆದಿದ್ದಾರೆ. 60 ಸದಸ್ಯ ಬಲದ ವಿಧಾನಸಭೆ ಮತ್ತು ಎರಡು ಲೋಕಸಭೆಯ ಇತರ ಕ್ಷೇತ್ರಗಳಿಗೆ ಏಪ್ರಿಲ್ 19 ರಂದು ಚುನಾವಣೆ ನಡೆಯಲಿದೆ.