ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಮಾಡದಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪರವಾಗಿರುವ ಮಠಾಧೀಶರು ಒತ್ತಾಯಿಸಿದ್ದರೆ, ಬದಲಾವಣೆ ಮಾಡಬೇಕೆಂದು ಪಂಚಮಸಾಲಿ ಶ್ರೀಗಳು ಒತ್ತಡ ಹೇರಿದ್ದಾರೆ ಎಂದು ಹೇಳಲಾಗಿದೆ.
ರಾಜ್ಯಕ್ಕೆ ಭೇಟಿ ನೀಡಿರುವ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಕಳೆದ ಮೂರು ದಿನಗಳಿಂದ ಸರಣಿ ಸಭೆ ನಡೆಸಿ ಸಚಿವರು, ಶಾಸಕರು, ಪಕ್ಷದ ನಾಯಕರೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ಗುರುವಾರ ರಾತ್ರಿ ಕುಮಾರಕೃಪ ಅತಿಥಿಗೃಹದಲ್ಲಿ ಅರುಣ್ ಸಿಂಗ್ ಅವರನ್ನು ಭೇಟಿ ಮಾಡಿದ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡಿ ಎಂದು ಹೇಳಿದ್ದಾರೆನ್ನಲಾಗಿದೆ.
ಪಂಚಮಸಾಲಿ ಸಮಾಜಕ್ಕೆ ಮುಖ್ಯಮಂತ್ರಿ ಹುದ್ದೆ ನೀಡುವಂತೆ ಶ್ರೀಗಳು ಮನವಿ ಮಾಡಿದ್ದು, ಯಡಿಯೂರಪ್ಪ ಅವರ ವಿರೋಧಿ ಬಣದಲ್ಲಿರುವ ಶಾಸಕರು ಮಾಡಿದ ಆರೋಪಗಳನ್ನು ಸ್ವಾಮೀಜಿ ಅವರಿಗೆ ತಿಳಿಸಿದ್ದಾರೆ. ಆಡಳಿತ ದುರುಪಯೋಗವಾಗುತ್ತಿದೆ. ಹೊಸಬರಿಗೆ ಅವಕಾಶ ನೀಡಬೇಕು. ನಾಲ್ಕು ಬಾರಿ ಸಮಾಜ ಅವರನ್ನು ಮುಖ್ಯಮಂತ್ರಿ ಮಾಡಿದರೂ ಸಮಾಜದ ಋಣ ತೀರಿಸದೇ ಸಮಾಜ ಒಡೆಯುವ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ ಎನ್ನಲಾಗಿದೆ.
ಸಮಾಜದ ಹೆಸರು ಬಳಸಿಕೊಂಡು ಅಧಿಕಾರಕ್ಕೆ ಬಂದವರು, ಒಡಕು ಮೂಡಿಸುವ ಕೆಲಸ ಮಾಡಿದ್ದು, ಅವರನ್ನು ಬದಲಾವಣೆ ಮಾಡಬೇಕೆಂದು ಸ್ವಾಮೀಜಿ ಅರುಣ್ ಸಿಂಗ್ ಅವರಿಗೆ ತಿಳಿಸಿದ್ದಾರೆನ್ನಲಾಗಿದೆ.