ಮಂಗಳೂರು: ಪುತ್ತೂರು ಧರ್ಮಸ್ಥಳ ಮಂಜುನಾಥೇಶ್ವರ ಯಕ್ಷಗಾನ ಮೇಳದ ಹಿರಿಯ ಕಲಾವಿದ ಗಂಗಾಧರ ಪುತ್ತೂರು(60) ಉಡುಪಿಯಲ್ಲಿ ಬುಧವಾರ ರಾತ್ರಿ ನಡೆದ ಯಕ್ಷಗಾನದಲ್ಲಿ ಪ್ರದರ್ಶನ ನೀಡಿದ ನಂತರ ಚೌಕಿಯಲ್ಲಿ ಬಣ್ಣ ಕಳಚುವಾಗ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಕೋಟ ಗಾಂಧಿ ಮೈದಾನದಲ್ಲಿ ನಡೆದ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ ಪ್ರಸಂಗದಲ್ಲಿ ಗಂಗಾಧರ ಪುತ್ತೂರು ಕುಕ್ಕಿನಂತಾಯ ದೈವದ ಪಾತ್ರ ನಿರ್ವಹಿಸಿದ್ದರು. ಮಧ್ಯರಾತ್ರಿ 12:20ರ ಸುಮಾರಿಗೆ ಚೌಕಿಗೆ ಮರಳಿ ವೇಷ ಕಳಚಿದ ನಂತರ ಮುಖದ ಬಣ್ಣ ಅಳಿಸಲೆಂದು ಕುಳಿತುಕೊಂಡಿದ್ದ ಅವರಿಗೆ ಇದ್ದಕ್ಕಿದ್ದಂತೆ ಎದೆ ನೋವು ಕಾಣಿಸಿಕೊಂಡಿದೆ. ಹಠಾತ್ ಹೃದಯಾಘಾತದಿಂದ ಕುಸಿದು ಬಿದ್ದು ಗಂಗಾಧರ ಪುತ್ತೂರು ಮೃತಪಟ್ಟಿದ್ದಾರೆ.
30 ವರ್ಷಗಳಿಂದ ಧರ್ಮಸ್ಥಳ ಮೇಳದಲ್ಲಿ ಕಲಾವಿದರಾಗಿ ಅವರು ಸೇವೆ ಸಲ್ಲಿಸುತ್ತಿದ್ದರು. ಮೃತರಿಗೆ ಪತ್ನಿ, ಪುತ್ರ ಇದ್ದಾರೆ. ಗುರುವಾರ ಸಂಜೆ ಪುತ್ತೂರಿನ ಹಿಂದೂ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗಿದೆ.