ಪ್ಯಾರಿಸ್ ಒಲಿಂಪಿಕ್ಸ್ 2024 ರಲ್ಲಿ ನಡೆದ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಪಾಕಿಸ್ತಾನಕ್ಕೆ ಚಿನ್ನ ತಂದುಕೊಟ್ಟ ಅಥ್ಲೀಟ್ ಅರ್ಷದ್ ನದೀಮ್ ಕಳೆದ ಹಲವಾರು ದಿನಗಳಿಂದ ಸುದ್ದಿಯಲ್ಲಿದ್ದಾರೆ. ಜನರು ಅವರ ಕುಟುಂಬ, ಆರ್ಥಿಕ ಪರಿಸ್ಥಿತಿ, ಅವರ ಹೋರಾಟದ ಕಥೆಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಒಂದು ಚಿನ್ನವು ಅವರ ಜೀವನವನ್ನು ಹೇಗೆ ಬದಲಾಯಿಸಿದೆ ಎಂಬುದನ್ನು ತೋರಿಸಲಾಗ್ತಿದೆ. ಈ ಮಧ್ಯೆ ಎಕ್ಸ್ ನಲ್ಲಿ ಅರ್ಷದ್ ನದೀಮ್ ಅವರಿಗೆ ಸಂಬಂಧಿಸಿದ ಒಂದು ವಿವಾದಾತ್ಮಕ ವಿಡಿಯೋ ವೈರಲ್ ಆಗಿದೆ.
ಈ ವಿಡಿಯೋದಲ್ಲಿ ಅರ್ಷದ್ ನದೀಮ್ ಅವರು ಲಷ್ಕರ್-ಎ-ತೊಯ್ಬಾ ಭಯೋತ್ಪಾದಕನ ಹತ್ತಿರ ಕುಳಿತು ಸಂಭಾಷಣೆ ನಡೆಸುತ್ತಿದ್ದಾರೆ. OsintTV ಹೆಸರಿನ ಖಾತೆಯಲ್ಲಿ ಈ ಫೊಟೋವನ್ನು ಹಂಚಿಕೊಳ್ಳಲಾಗಿದೆ. ಪಾಕಿಸ್ತಾನದ ರಾಷ್ಟ್ರೀಯ ಹೀರೋ ಮತ್ತು ಒಲಂಪಿಕ್ ಚಿನ್ನದ ಪದಕ ವಿಜೇತ ಅರ್ಷದ್ ನದೀಮ್ ಅಂತರಾಷ್ಟ್ರೀಯವಾಗಿ ಘೋಷಿಸಲಾದ ಭಯೋತ್ಪಾದಕ ಮತ್ತು ಭಯೋತ್ಪಾದಕ ಸಂಘಟನೆಗಳೊಂದಿಗೆ ನಿಕಟ ಸಂಪರ್ಕವನ್ನು ಹೊಂದಿದ್ದಾರೆಯೇ ಎಂದು ಪ್ರಶ್ನೆ ಮಾಡಲಾಗಿದೆ. ದಯವಿಟ್ಟು ಜಗತ್ತಿನಾದ್ಯಂತ ಸಂಬಂಧಿತ ಕಾನೂನು ಜಾರಿ ಸಂಸ್ಥೆಗಳು ಹಾಗೂ ಅಂತರಾಷ್ಟ್ರೀಯ ಕ್ರೀಡಾ ಸಂಸ್ಥೆಗಳನ್ನು ಟ್ಯಾಗ್ ಮಾಡಿ ಎಂದು ಶೀರ್ಷಿಕೆ ಹಾಕಲಾಗಿದೆ.
ನೀವು ಈ ರೀತಿ ಅಲ್ಲಾಹನ ಮುಂದೆ ತಲೆಬಾಗಿದರೆ, ಎಲ್ಲಾ ಮುಸ್ಲಿಮರು ನಿಮ್ಮ ಬಗ್ಗೆ ಹೆಮ್ಮೆಪಡುತ್ತಾರೆ. ಇದು ಬಹಳ ದೊಡ್ಡ ವಿಷಯ ಎಂದು ಲಷ್ಕರ್-ಇ-ತಯ್ಯಿಬಾದ ಹ್ಯಾರಿಸ್ ಧರ್, ಅರ್ಷದ್ ನದೀಮ್ ಅವರಿಗೆ ಸಲಹೆ ನೀಡ್ತಿದ್ದಾನೆ. ಅದಕ್ಕೆ ಅರ್ಷದ್ ಇನ್ಶಾ ಅಲ್ಲಾ ಅನ್ನೋದನ್ನು ಕೇಳಬಹುದು.