ಏನೂ ತಪ್ಪು ಮಾಡದೇ ಇದ್ದರೂ ಸಹ ಜೈಲಿನಲ್ಲಿ 20 ವರ್ಷ ಶಿಕ್ಷೆ ಅನುಭವಿಸಿದ ಉತ್ತರ ಪ್ರದೇಶದ ವ್ಯಕ್ತಿಯೊಬ್ಬರು ಕೊನೆಗೂ ಜೈಲಿನಿಂದ ಹೊರಬಂದಿದ್ದಾರೆ.
ಅಬ್ದುಲ್ಲಾಹ್ ಅಯೋಬ್ ಹೆಸರಿನ ಈ ವ್ಯಕ್ತಿಯನ್ನು ಒಂದು ಕೋಟಿ ರೂ. ಮೌಲ್ಯದ ’ಹೆರಾಯಿನ್’ ಹೊಂದಿರುವ ಆಪಾದನೆ ಮೇಲೆ ಮಾರ್ಚ್ 14, 2003ರಲ್ಲಿ ಬಂಧಿಸಲಾಗಿತ್ತು. ತಮ್ಮ ಬಳಿ ಇದ್ದಿದ್ದು ಹೆರಾಯಿನ್ ಅಲ್ಲ ಎಂದು ಸಾಬೀತು ಪಡಿಸಲು ಅಬ್ದುಲ್ಲಾಹ್‌ಗೆ 20 ವರ್ಷಗಳು ತೆಗೆದುಕೊಂಡ ಪರಿಣಾಮ ಆತ ಎರಡು ದಶಕಗಳ ಕಾಲ ಈ ಶಿಕ್ಷೆ ಅನುಭವಿಸಿದ್ದಾರೆ.
ಅಯ್ಯುಬ್ ಮನೆಯಲ್ಲಿ ಬಾಡಿಗೆಗೆ ವಾಸವಿದ್ದ ಪೊಲೀಸ್ ಪೇದೆಯೊಬ್ಬ ಬಾಡಿಗೆ ಕಟ್ಟದೇ ಇದ್ದ ಕಾರಣ ಆತನನ್ನು ಮನೆಯಿಂದ ಹೊರ ಹಾಕಲಾಗಿದ್ದು, ಈ ವಿಚಾರವಾಗಿ ಸೇಡು ತೀರಿಸಿಕೊಳ್ಳಲು ಅಯ್ಯುಬ್ ವಿರುದ್ಧ ಪೇದೆಯು ಮೂವರು ಹಿರಿಯ ಅಧಿಕಾರಿಗಳೊಂದಿಗೆ ಸೇರಿ ಸುಳ್ಳು ಪ್ರಕರಣವೊಂದರಲ್ಲಿ ಸಿಲುಕಿಸಿದ್ದಾನೆ ಎಂದು ಆಪಾದಿತನ ಪರ ವಕೀಲ ಪ್ರೇಮ್ ಪ್ರಕಾಶ್ ಶ್ರೀವಾಸ್ತವ ತಿಳಿಸಿದ್ದಾರೆ.
ಅಯ್ಯುಬ್‌ನಿಂದ ವಶಕ್ಕೆ ಪಡೆದ ವಸ್ತು ಹೆರಾಯಿನ್ ಎಂದು ಸಾಬೀತು ಪಡಿಸಲು ವಿಧಿ ವಿಜ್ಞಾನ ಪ್ರಯೋಗಾಲದಯ ಸಿಬ್ಬಂದಿಯೊಂದಿಗೂ ಫಿಕ್ಸಿಂಗ್ ಮಾಡಿಕೊಂಡಿದ್ದರು ಪೊಲೀಸರು. ಆದರೆ ಈ ವಸ್ತುವನ್ನು ಲಖನೌನ ಪ್ರಯೋಗಾಲಯಕ್ಕೆ ಕಳುಹಿಸಿದ ಬಳಿಕ ಅದು ಹೆರಾಯಿನ್ ಅಲ್ಲ ಎಂದು ತಿಳಿದು ಬಂದಿದೆ.
ಹೀಗೆ ತಪ್ಪಾಗಿ ಆಪಾದಿತರಾಗಿದ್ದ ಅಯ್ಯುಬ್‌ರನ್ನು ಪ್ರಕರಣದಿಂದ ಖುಲಾಸೆಗೊಳಿಸಿದ ನ್ಯಾಯಾಧೀಶ ವಿಜಯ್ ಕುಮಾರ್ ಕಾತಿಯಾರ್, ಇಡೀ ಪ್ರಕರಣದ ಹಾದಿ ತಪ್ಪಿಸುವ ಮೂಲಕ ಪೊಲೀಸರು ನ್ಯಾಯಾಲಯದ ಸಮಯ ವ್ಯರ್ಥ ಮಾಡಿದ್ದಾರೆ ಎಂದು ಛೀಮಾರಿ ಹಾಕಿದ್ದಾರೆ.