ಹೈದರಾಬಾದ್: ಪ್ರವಾದಿ ಬಗ್ಗೆ ಬಿಜೆಪಿ ಶಾಸಕ ರಾಜಾಸಿಂಗ್ ಅವಹೇಳನಕಾರಿ ಹೇಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಂಪಲ್ಲಿ ಕೋರ್ಟ್ ರಾಜಾ ಸಿಂಗ್ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ.
ರಾಜಾ ಸಿಂಗ್ ಅವರನ್ನು 14 ದಿನಗಳ ಕಾಲ ನ್ಯಾಯಾಂಗ ವಶಕ್ಕೆ ಕೋರ್ಟ್ ನೀಡಿದ್ದು, ಈ ಹಿನ್ನೆಲೆಯಲ್ಲಿ ಅವರನ್ನು ಚಂಚಲಗೂಡ ಸೆಂಟ್ರಲ್ ಜೈಲಿಗೆ ರವಾನೆ ಮಾಡಲಾಗಿದೆ. ಹೈದರಾಬಾದ್ ನ ಗೋಶಾಮಹಲ್ ಬಿಜೆಪಿ ಶಾಸಕ ರಾಜಾ ಸಿಂಗ್ ಪ್ರವಾದಿ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಹಿನ್ನೆಲೆಯಲ್ಲಿ ಅವರ ವಿರುದ್ಧ ಐಪಿಸಿಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಬಂಧಿತ ಬಿಜೆಪಿ ಶಾಸಕ ಟಿ. ರಾಜಾ ಸಿಂಗ್ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.
ಈ ನಡುವೆ ರಾಜಾ ಸಿಂಗ್ ಅವರನ್ನು ಬಿಜೆಪಿ ಅಮಾನತುಗೊಳಿಸಿದೆ. ಪಕ್ಷದಿಂದ ಏಕೆ ಉಚ್ಚಾಟಿಸಬಾರದು ಎಂಬುದಕ್ಕೆ 10 ದಿನಗಳಲ್ಲಿ ಉತ್ತರ ನೀಡುವಂತೆ ಸೂಚಿಸಿದೆ.