ಹಾಸನ: 10 ವರ್ಷ ಕಳೆದರೂ ರೈತ ಮಹಿಳೆಯ ಭೂಮಿ ಹದ್ದು ಬಸ್ತು ಮಾಡಿಕೊಡದ ಪ್ರಕರಣದಲ್ಲಿ ಹಲವು ಬಾರಿ ಸಮನ್ಸ್ ನೀಡಿದರೂ ನ್ಯಾಯಾಲಯಕ್ಕೆ ಹಾಜರಾಗದ ಹಾಸನ ತಾಲೂಕು ತಹಶೀಲ್ದಾರ್ ಬಂಧನಕ್ಕೆ ಸಿವಿಲ್ ಕೋರ್ಟ್ ಆದೇಶ ಹೊರಡಿಸಿದೆ.
ಗುರುವಾರ ವಕೀಲರು ನ್ಯಾಯಾಲಯದ ಅಮೀನರ ಜೊತೆ ಬಂದಾಗ ತಹಶೀಲ್ದಾರ್ ಶ್ವೇತಾ ಅವರು ತಮ್ಮ ಕಚೇರಿಯಲ್ಲಿ ಇಲ್ಲದ ಹಿನ್ನೆಲೆಯಲ್ಲಿ ವಕೀಲರು ಮತ್ತು ಆಡಳಿತ ಶಿರಸ್ತೆದಾರರ ಜೊತೆ ವಾಗ್ವಾದ ನಡೆದಿದೆ.
10 ವರ್ಷಗಳ ಹಿಂದೆ 2014ರಲ್ಲಿ ಹದ್ದುಬಸ್ತುಗಾಗಿ ರೈತ ಮಹಿಳೆ ಹೇಮಾ ಹಾಗೂ ರಂಗಸ್ವಾಮಿ ಅವರು ಅರ್ಜಿ ಸಲ್ಲಿಸಿದ್ದರು. ಅರ್ಜಿ ಸಲ್ಲಿಸಿದ ನಂತರ ಇಬ್ಬರು ಮೃತಪಟ್ಟಿದ್ದಾರೆ.
ಅನೇಕ ತಹಶೀಲ್ದಾರ್ ಗಳು ಬಂದು ಹೋದರೂ ಪ್ರಕರಣ ಇತ್ಯರ್ಥವಾಗಿಲ್ಲ. ಈ ಕುರಿತಾಗಿ ತಹಶೀಲ್ದಾರ್ ಶ್ವೇತಾ ಅವರ ಅಧಿಕಾರವಧಿಯಲ್ಲಿಯೂ ಇತ್ಯರ್ಥಕ್ಕೆ ಯಾವುದೇ ಕ್ರಮ ಕೈಗೊಂಡಿಲ್ಲ. ಅವರಿಗೆ ಪ್ರಕರಣ ಸಂಬಂಧ ಹಲವು ಬಾರಿ ಸಮನ್ಸ್ ನೀಡಿದ್ದರೂ ನ್ಯಾಯಾಲಯಕ್ಕೆ ಹಾಜರಾಗಿಲ್ಲ. ಹೀಗಾಗಿ ಸಿವಿಲ್ ನ್ಯಾಯಾಲಯ ತಹಶೀಲ್ದಾರ್ ಬಂಧನಕ್ಕೆ ಆದೇಶ ಹೊರಡಿಸಿದೆ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ತಹಶೀಲ್ದಾರ್ ಶ್ವೇತಾ ಅವರು, ವಕೀಲರು ಕಚೇರಿಗೆ ಆಗಮಿಸಿದ್ದ ವೇಳೆ ಕಾರ್ಯನಿಮಿತ್ತ ಹೊರಗೆ ಹೋಗಿದ್ದೆ. ನವೆಂಬರ್ 8ರಂದು ಹಾಸನಾಂಬ ದೇವಸ್ಥಾನದ ಕರ್ತವ್ಯದಲ್ಲಿದ್ದೆ. ಹೀಗಾಗಿ ನ್ಯಾಯಾಲಯಕ್ಕೆ ಹಾಜರಾಗಲು ಸಾಧ್ಯವಾಗಿಲ್ಲ ಎಂದು ಹೇಳಿದ್ದಾರೆ.