ಬೆಂಗಳೂರು: ಅನಾಮಧೇಯ ಹೆಸರಲ್ಲಿ ಸಾಹಿತಿಗಳಿಗೆ ಬೆದರಿಕೆ ಪತ್ರ ಬರೆದಿದ್ದ ಶಂಕಿತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನಾಡಿನ ಪ್ರಮುಖ ಸಾಹಿತಿಗಳಿಗೆ ಪತ್ರ ಬರೆದು ಜೀವಬೆದರಿಕೆ ಹಾಕಿದ್ದ ಪ್ರಕರಣವನ್ನು ಸಿಸಿಬಿ ಭೇದಿಸುವಲ್ಲಿ ಯಶಸ್ವಿಯಾಗಿದೆ. ಶಂಕಿತ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದೆ. ದಾವಣಗೆರೆ ಸೇರಿದಂತೆ ರಾಜ್ಯದ ವಿವಿಧ ಕಡೆ ಕಾರ್ಯಾಚರಣೆ ನಡೆಸಿದ್ದು, ಪತ್ರ ಬರೆದ ಶಂಕೆ ಮೇರೆಗೆ 8 ಜನರನ್ನು ವಶಕ್ಕೆ ಪಡೆದು ವಿಚಾರಿಸಲಾಗಿದೆ.
ಒಬ್ಬನ ಮೇಲೆ ಪ್ರಬಲ ಶಂಕೆ ವ್ಯಕ್ತವಾಗಿದೆ. ಇನ್ನೆರಡು ದಿನಗಳಲ್ಲಿ ಭೀತಿ ಸೃಷ್ಟಿಸಿದ ವ್ಯಕ್ತಿಯ ಮೂಲ ಬಯಲಾಗಲಿದೆ ಎಂದು ಹೇಳಲಾಗಿದೆ. ಸಾಹಿತಿಗಳಾದ ಕುಂ. ವೀರಭದ್ರಪ್ಪ, ಬಂಜಗೆರೆ ಜಯಪ್ರಕಾಶ್, ಬಿ.ಎಲ್. ವೇಣು, ಬಿ.ಟಿ. ಲಲಿತಾನಾಯಕ್, ವಸುಂಧರಾ ಭೂಪತಿ ಮೊದಲಾದವರಿಗೆ ಅನಾಮಧೇಯ ಹೆಸರಲ್ಲಿ ಜೀವ ಬೆದರಿಕೆ ಪತ್ರ ಬಂದಿದ್ದು, ಸರ್ಕಾರ ಗಂಭೀರವಾಗಿ ಪರಿಗಣಿಸಿ ಸಿಸಿಬಿಗೆ ತನಿಖೆಗೆ ವಹಿಸಿತ್ತು.
ಓರ್ವ ವ್ಯಕ್ತಿಯಿಂದಲೇ ಪತ್ರ ಬಂದ ಬಗ್ಗೆ ಸಿಸಿಬಿಗೆ ಅನುಮಾನ ಇತ್ತು. ಇದರ ಆಧಾರದ ಮೇಲೆ ತನಿಖೆ ನಡೆಸಿ ಶಂಕಿತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ ಎಂದು ಹೇಳಲಾಗಿದೆ.