
ಶಿವಮೊಗ್ಗ: ಒಂದೇ ದಿನ ಶಿವಮೊಗ್ಗ ಮತ್ತು ಭದ್ರಾವತಿಯ 7 ಸ್ಥಳಗಳಲ್ಲಿ ಸುಲಿಗೆ ಮಾಡಿದ್ದ ಆರೋಪಿಗಳನ್ನು ಶಿವಮೊಗ್ಗದ ಕೋಟೆ ಠಾಣೆ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಶಿವಮೊಗ್ಗದ ಬೊಮ್ಮನಕಟ್ಟೆಯ ವಿಶಾಲ್, ಪ್ರೀತಮ್ ಮತ್ತು ಆಯನೂರಿನ ಗಗನ್ ಬಂಧಿತ ಆರೋಪಿಗಳು. ಇವೆರೆಲ್ಲರೂ 19 -20 ವರ್ಷದವರಾಗಿದ್ದಾರೆ.
ದಾವಣಗೆರೆ ಜಿಲ್ಲೆ ಸವಳಂಗದಲ್ಲಿ ನವೆಂಬರ್ 2 ರಂದು ಬೈಕ್ ಕಳವು ಮಾಡಿದ್ದ ಆರೋಪಿಗಳು, ಅದೇ ಬೈಕ್ ಬಳಸಿಕೊಂಡು ದೀಪಾವಳಿ ದಿನ ಬೆಳಗಿನಜಾವದ ಹೊತ್ತಲ್ಲಿ ಅಡ್ರೆಸ್ ಕೇಳುವ ನೆಪದಲ್ಲಿ ವಿವಿಧೆಡೆ ದರೋಡೆ ನಡೆಸಿದ್ದರು. ಚಾಕು ತೋರಿಸಿ ಬೆದರಿಸಿ, ಹಲವರ ಮೇಲೆ ಹಲ್ಲೆ ಮಾಡಿ ಹಣ, ಎಟಿಎಂ ಕಾರ್ಡ್, ಮೊಬೈಲ್ ಫೋನ್, ಚಿನ್ನದ ಸರ ಸುಲಿಗೆ ಮಾಡಿದ್ದರು.
ಭದ್ರಾವತಿ ಹಳೆನಗರ ಹಾಗೂ ಶಿವಮೊಗ್ಗದ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದು, ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ತನಿಖೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ 10 ಮೊಬೈಲ್ ಫೋನ್, ಆಭರಣ ಮತ್ತು ಬೈಕ್ ವಶಕ್ಕೆ ಪಡೆಯಲಾಗಿದೆ ಎಂದು ಹೇಳಲಾಗಿದೆ.