ಬೆಂಗಳೂರು: ಪೊಲೀಸರೇ ಆರೋಪಿ ಅಪಹರಿಸಿ 45 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದ ಪ್ರಕರಣದಲ್ಲಿ ಮೂವರು ಪೊಲೀಸರನ್ನು ಬಂಧಿಸಲಾಗಿದೆ.
ಹುಲಿ ಚರ್ಮ, ಉಗುರು ಮಾರಾಟ ಮಾಡುತ್ತಿದ್ದ ರಾಮಾಂಜನಿಯನ್ನು ಅಪಹರಿಸಿ ಆತನ ತಲೆಗೆ ಗನ್ ಇಟ್ಟು 45 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ಮಾರ್ಚ್ 18ರಂದು ಸಂಜೆ 4:30ರ ಸುಮಾರಿಗೆ ಪೊಲೀಸರು ರಾಮಾಂಜನಿಯನ್ನು ಅಪಹರಿಸಿದ್ದರು.
ಬೆಂಗಳೂರಿನ ಬಾಗಲೂರು ಠಾಣೆಯಲ್ಲಿ ರಾಮಾಂಜನಿ ಸಂಬಂಧಿಯಾಗಿರುವ ಶಿವರಾಮಯ್ಯ ಕೇಸ್ ದಾಖಲಿಸಿದ್ದರು. ಆರೋಪಿಗಳ ಪತ್ತೆಗಾಗಿ ಬಾಗಲೂರು ಠಾಣೆ ಪೋಲಿಸರು ವಿಶೇಷ ತಂಡ ರಚಿಸಿದ್ದರು. ಬಾಗಲೂರು ಪೊಲೀಸರು ರಾಮಾಂಜನಿಯನ್ನು ರಕ್ಷಿಸಿ ಕರೆತಂದು ವಿಚಾರಣೆ ನಡೆಸಿದ್ದರು.
ಪೊಲೀಸರ ವಿಚಾರಣೆ ಸಂದರ್ಭದಲ್ಲಿ ಅಪಹರಣದ ಬಗ್ಗೆ ರಾಮಾಂಜನಿ ಮಾಹಿತಿ ನೀಡಿದ್ದ. ಪೊಲೀಸರು ಕರೆದುಕೊಂಡು ಹೋಗಿ ಅಕ್ರಮ ಬಂಧನದಲ್ಲಿಟ್ಟಿದ್ದ ಬಗ್ಗೆ ಮಾಹಿತಿ ನೀಡಿದ್ದ. ಹಣ ಕೊಡದಿದ್ದರೆ ಸಾಯುವವರೆಗೂ ಜೈಲಿನಲ್ಲಿ ಇರುವಂತೆ ಮಾಡುವುದಾಗಿ ಧಮ್ಕಿ ಹಾಕಿದ್ದಾರೆ ಎಂದು ತಿಳಿಸಿದ್ದ ಎನ್ನಲಾಗಿದೆ.
ಮಾರತಹಳ್ಳಿ ಠಾಣೆ ಪಿಎಸ್ಐ ರಂಗೇಶ್ ಹಾಗೂ ಪಿಸಿ ಗಳಾದ ಶಬ್ಬೀರ್, ಜಾಕೀರ್, ಹರೀಶ, ಮಹದೇವ, ಮಹೇಶ ಬೆದರಿಕೆ ಹಾಕಿದ್ದಾಗಿ ಆರೋಪಿಸಲಾಗಿತ್ತು. ರಾಮಾಂಜನಿ ಹೇಳಿಕೆ ಆಧರಿಸಿ ಎ2, ಕೆ.ಎಲ್. ಹರೀಶ್, ಎ3 ಶಬ್ಬೀರ್ ಅಲಿಯಾಸ್ ಶಬ್ಬೀರ್ ಖಾನ್, ಎ4 ಜಾಕಿರ್ ಹುಸೇನ್ ಅವರನ್ನು ಬಂಧಿಸಲಾಗಿದ್ದು, ನಾಪತ್ತೆಯಾಗಿರುವ ಪಿಎಸ್ಐ ರಂಗೇಶ್ ಮತ್ತು ಇತರರ ಬಂಧನಕ್ಕೆ ಶೋಧ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.