ಬೆಂಗಳೂರು: 3 ತಿಂಗಳ ಗರ್ಭಿಣಿ ಪತ್ನಿ ಮೇಲೆ ಡೀಸೆಲ್ ಸುರಿದು ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಎರಡೂವರೆ ವರ್ಷದ ಮಗುವನ್ನು ಕಚ್ಚಿ ಆರೋಪಿ ವಿಕೃತಿ ಮೆರೆದಿದ್ದಾನೆ. ಗಾಯಗೊಂಡ ಮೀನಾ(23) ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆರೋಪಿ ಬಾಬುನನ್ನು ಪೊಲೀಸರು ಬಂಧಿಸಿದ್ದಾರೆ. ಮೀನಾ ಎರಡನೇ ಮದುವೆಯಾಗಿದ್ದು, ಬಾಬು ಮದ್ಯಪಾನ ಮಾಡಲು ಹಣ ಕೇಳುತ್ತಿದ್ದ. ಮೀನಾ ಕೂಲಿ ಮಾಡಿ ಕೂಡಿಟ್ಟ ಹಣವನ್ನು ಕುಡಿತಕ್ಕೆ ಹಾಳುಮಾಡುತ್ತಿದ್ದ.
7 ವರ್ಷದ ಹಿಂದೆ ವಿಜಯಕಾಂತ್ ಎಂಬುವವರನ್ನು ಮದುವೆಯಾಗಿದ್ದ ಮೀನಾ ಅವರಿಗೆ ಮೂವರು ಹೆಣ್ಣುಮಕ್ಕಳಿದ್ದಾರೆ. ಮೂರು ವರ್ಷದ ಹಿಂದೆ ವಿಜಯಕಾಂತ್ ಮೃತಪಟ್ಟ ನಂತರ ಪರಿಚಿತನಾದ ಬಾಬುನನ್ನು ಮದುವೆಯಾಗಿ ಬೈಯಪ್ಪನಹಳ್ಳಿಯಲ್ಲಿ ವಾಸವಾಗಿದ್ದರು.
ಮೀನಾ ಕೂಲಿಮಾಡಿ ತಂದ ಹಣವನ್ನು ಬಾಬು ಕುಡಿದು ಹಾಳು ಮಾಡುತ್ತಿದ್ದ. ಮಾ. 9 ರಂದು ಜಗಳದ ವೇಳೆ ಮೀನಾ ಮೇಲೆ ಡೀಸೆಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಮೂರು ತಿಂಗಳ ಗರ್ಭಿಣಿಯಾಗಿರುವ ಮೀನಾ ಸುಟ್ಟ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೊದಲ ಪತಿಗೆ ಜನಿಸಿದ ಎರಡೂವರೆ ವರ್ಷದ ಹೆಣ್ಣು ಮಗುವನ್ನು ಕೂಡ ಬಾಬು ಕಚ್ಚಿ ಗಾಯಗೊಳಿಸಿದ್ದಾನೆ. ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.