ಚಿಕ್ಕಮಗಳೂರು: ತನ್ನನ್ನು ಬಿಟ್ಟು ಮತ್ತೆ ಪತಿಯೊಂದಿಗೆ ಹೋಗಿದ್ದಕ್ಕೆ ಗೃಹಿಣಿಯನ್ನು ಬರ್ಬರವಾಗಿ ಹತ್ಯೆಗೈದು ಕೃಷಿಹೊಂಡಕ್ಕೆ ಎಸೆದಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಗಡಿಗೇಶ್ವರ ಗ್ರಾಮದ ಅರಣ್ಯದಲ್ಲಿ ಅಡಗಿದ್ದ ಹಂತಕನನ್ನು ಚಿರಂಜೀವಿಯನ್ನು ಬಂಧಿಸಲಾಗಿದೆ. ತೃಪ್ತಿ ಕೊಲೆಯಾದ ಮಹಿಳೆ. ಚಿರಂಜೀವಿ ಮಹಿಳೆ ಕೊಲೆಗೈದ ಆರೋಪಿ. ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಕಿಚ್ಚಬ್ಬಿಯಲ್ಲಿ ಈ ಘಟನೆ ನಡೆದಿದೆ.
ಅದಾಗಲೇ ವಿವಾಹವಾಗಿದ್ದ ತೃಪ್ತಿ ಫೇಸ್ ಬುಕ್ ಮೂಲಕ ಚಿರಂಜೀವಿ ಎಂಬಾತ ಪರಿಚಯವಾಗಿದ್ದ. ಇಬ್ಬರ ನಡುವೆ ಸ್ನೇಹ ಪ್ರೀತಿಗೆ ತಿರುಗಿದೆ. ತಿಂಗಳ ಹಿಂದಷ್ಟೇ ತೃಪ್ತಿ, ಪತಿಯನ್ನು ಬಿಟ್ಟು ಪ್ರಿಯಕರ ಚಿರಂಜೀವಿ ಜೊತೆ ಎಸ್ಕೇಪ್ ಆಗಿದ್ದಳು. ಈ ಬಗ್ಗೆ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇಬ್ಬರನ್ನು ಪತ್ತೆ ಮಾಡಿದ ಪೊಲೀಸರು ಠಾಣೆಗೆ ಕರೆತಂದಿದ್ದರು. ಬಳಿಕ ರಾಜಿ ಪಂಚಾಯಿತಿ ಮಾಡಿಸಿ, ತೃಪ್ತಿಯನ್ನು ಆಕೆಯ ಪತಿಯೊಂದಿಗೆ ಕಳುಹಿಸಿದ್ದರು.
ತೃಪ್ತಿ ಪತಿಯೊಂದಿಗೆ ಜೀವನ ನಡೆಸುತ್ತಿದ್ದಂತೆ ಸಿಟ್ಟಿಗೆದ್ದ ಪ್ರಿಯಕರ ಚಿರಂಜೀವಿ, ಮನೆಗೆ ನುಗ್ಗಿ ತೃಪ್ತಿಯನ್ನು ಬರ್ಬರವಾಗಿ ಕೊಲೆಗೈದು, ಬಳಿಕ ಮೃತದೇಹವನ್ನು ಕೃಷಿ ಹೊಂಡಕ್ಕೆ ಎಸೆದು ಪರಾರಿಯಾಗಿದ್ದ.
ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಬಾಳೆಹೊನ್ನೂರು ಪೊಲೀಸರು ಕಾರ್ಯಾಚರಣೆ ನಡೆಸಿ ಹಂತಕ ಚಿರಂಜೀವಿಯನ್ನು ಬಂಧಿಸಿದ್ದಾರೆ. ಗ್ರಾಮದಿಂದ 10 ಕಿ.ಮೀ ದೂರದ ಅರಣ್ಯದಲ್ಲಿ ಅಡಗಿದ್ದ ಆರೋಪಿಯನ್ನು ಬಂಧಿಸಲಾಗಿದೆ.