ಬೆಂಗಳೂರು: ಜನವರಿ 24 ರ ಇಂದು ನಡೆಯಬೇಕಿದ್ದ ಎಫ್.ಡಿ.ಎ. ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿಯನ್ನು ಬಂಧಿಸಲಾಗಿದೆ.
ಕರ್ನಾಟಕ ಲೋಕಸೇವಾ ಆಯೋಗದ ಸಿಬ್ಬಂದಿಯೇ ಪ್ರಶ್ನೆಪತ್ರಿಕೆ ಸೋರಿಕೆಯಲ್ಲಿ ಭಾಗಿಯಾಗಿರುವುದು ಗೊತ್ತಾಗಿದೆ. 1112 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು 3.4 ಲಕ್ಷ ಅಭ್ಯರ್ಥಿಗಳು ಪರೀಕ್ಷೆ ಕಟ್ಟಿದ್ದರು. ಭಾನುವಾರ ನಡೆಯಬೇಕಿದ್ದ ಪರೀಕ್ಷೆಗೆ ಸುಮಾರು 2.82 ಲಕ್ಷ ಅಭ್ಯರ್ಥಿಗಳು ಪ್ರವೇಶ ಪತ್ರ ಡೌನ್ಲೋಡ್ ಮಾಡಿಕೊಂಡಿದ್ದರು.
ಆದರೆ, ಪ್ರಶ್ನೆಪತ್ರಿಕೆ ಸೋರಿಕೆಯಾದ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ಮುಂದೂಡಲಾಗಿದೆ. ಕೆಪಿಎಸ್ಸಿ ಪ್ರಥಮ ದರ್ಜೆ ಸಹಾಯಕ ರಮೇಶ್ ಇದರಲ್ಲಿ ಭಾಗಿಯಾಗಿರುವ ಆರೋಪ ಕೇಳಿಬಂದಿದೆ. ವಾಣಿಜ್ಯ ತೆರಿಗೆ ಇಲಾಖೆಯ ವಿಜಿಲೆನ್ಸ್ ಇನ್ಸ್ಪೆಕ್ಟರ್ ಚಂದ್ರು, ರಾಚಪ್ಪ ಸೇರಿದಂತೆ ಆರು ಮಂದಿಯನ್ನು ಬಂಧಿಸಲಾಗಿದೆ. ಸಿಸಿಬಿ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿದ್ದು ಆರು ಮಂದಿಯನ್ನು ಬಂಧಿಸಿ 24 ಲಕ್ಷ ರೂಪಾಯಿ ನಗದು, 3 ವಾಹನ ವಶಕ್ಕೆ ಪಡೆದುಕೊಂಡಿದ್ದಾರೆ.
ಬೆಂಗಳೂರಿನ ಉಲ್ಲಾಳ ಮತ್ತು ವಿಜಯನಗರದಲ್ಲಿ ದಾಳಿ ನಡೆಸಿದ್ದು ಪ್ರಶ್ನೆಪತ್ರಿಕೆಯ ಪ್ರತಿಗಳು ದೊರೆತಿವೆ. ಪರಿಶೀಲನೆ ವೇಳೆ ಅವು ಭಾನುವಾರ ನಡೆಯಬೇಕಿದ್ದ ಪರೀಕ್ಷೆಯ ಪ್ರಶ್ನೆಪತ್ರಿಕೆಗಳು ಎನ್ನುವುದು ಖಚಿತವಾಗಿದ್ದು, ತನಿಖೆ ಮುಂದುವರಿಸಲಾಗಿದೆ. ಇಂದು ನಡೆಯಬೇಕಿದ್ದ ಪರೀಕ್ಷೆ ಮುಂದೂಡಲಾಗಿದೆ.