
ಚಿತ್ರದುರ್ಗ: ಭಾರತೀಯ ಸೇನೆಯಲ್ಲಿ ಉದ್ಯೋಗ ಕೊಡಿಸುವುದಾಗಿ ಭರವಸೆ ನೀಡಿ 150ಕ್ಕೂ ಅಧಿಕ ಯುವಕರಿಗೆ ಒಂದು ಕೋಟಿ ರೂಪಾಯಿಗೂ ಹೆಚ್ಚು ವಂಚಿಸಿದ್ದ ಆರೋಪಿಯನ್ನು ಬಂಧಿಸಲಾಗಿದೆ.
ಹುಬ್ಬಳ್ಳಿ ಮೂಲದ ಶಿವರಾಜ್ ವಟಗಲ್(40) ಬಂಧಿತ ಆರೋಪಿ. ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸಿರುವುದಾಗಿ ಸುಳ್ಳು ಹೇಳಿ ಯುವಕರನ್ನು ನಂಬಿಸಿದ್ದ ಶಿವರಾಜ್ ಇದಕ್ಕಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದ.
ಭಾರತೀಯ ಸೇನೆ, ವಾಯು ಸೇನೆ, ನೌಕಾಪಡೆಯಲ್ಲಿ ಕೆಲಸ ಕೊಡಿಸುತ್ತೇನೆ ಎಂದು ಯುವಕರಿಂದ ಹಣ ಪಡೆದಿದ್ದ. ಈತನಿಂದ ವಂಚನೆಗೊಳಗಾದ ಪ್ರಕಾಶ್ ಎಂಬುವರು ಚಿತ್ರದುರ್ಗದ ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರು ಹಾಗೂ ಸೇನಾ ಗುಪ್ತಚರ ವಿಭಾಗ ಜಂಟಿ ಕಾರ್ಯಾಚರಣೆ ನಡೆಸಿ ಚಿತ್ರದುರ್ಗದಲ್ಲಿ ಶಿವರಾಜ್ ಮತ್ತು ಆತನ ಸಂಗಾತಿ ಭೀಮವ್ವ ಅವರನ್ನು ಬಂಧಿಸಿದ್ದಾರೆ.
ಚಿತ್ರದುರ್ಗ, ದಾವಣಗೆರೆ ಜಿಲ್ಲೆ ಮಾತ್ರವಲ್ಲದೆ ಉತ್ತರ ಕರ್ನಾಟಕದ ಹಲವೆಡೆ ಯುವಕರಿಗೆ ಶಿವರಾಜ್ ವಂಚಿಸಿರುವುದು ಗೊತ್ತಾಗಿದೆ. ಶ್ರೀರಾಮಪುರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಆರೋಪಿಯಿಂದ ನಕಲಿ ಗುರುತಿನ ಚೀಟಿ ನೇಮಕಾತಿ ಸಂಬಂಧಿಸಿದ ದಾಖಲೆ ಜಪ್ತಿ ಮಾಡಲಾಗಿದೆ.