ಮಂಗಳೂರು: ಸೋಫಾ ಮೇಲೆ ಶರ್ಟ್ ಇಟ್ಟ ಕ್ಷುಲ್ಲಕ ಕಾರಣಕ್ಕೆ ಮಾವನನ್ನು ಮನೆಯಲ್ಲಿ ಕೂಡಿ ಹಾಕಿ ಹಲ್ಲೆ ನಡೆಸಿದ ಮೆಸ್ಕಾಂ ಮಹಿಳಾ ಅಧಿಕಾರಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮನೆಯ ಸಿಸಿ ಟಿವಿ ಕ್ಯಾಮರಾ ದೃಶ್ಯಗಳನ್ನು ವೀಕ್ಷಿಸಿದ ಪತಿ, ತನ್ನ ತಂದೆಗೆ ಹಿಂಸೆ ನೀಡಿದ ಪತ್ನಿ ವಿರುದ್ಧ ಪೊಲೀಸರಿಗೆ ದೂರು ಕೊಡಿಸಿದ್ದಾರೆ. ಮಂಗಳೂರಿನ ಅತ್ತಾವರ ಮೆಸ್ಕಾಂನಲ್ಲಿ ಕ್ಯಾಶಿಯರ್ ಆಗಿರುವ ಉಮಾಶಂಕರಿ(47) ಬಂಧಿತ ಆರೋಪಿ.
ಕುಲಶೇಖರ ನಿವಾಸಿ ಪದ್ಮನಾಭ ಸುವರ್ಣ(88) ಸೊಸೆಯೊಂದಿಗೆ ವಾಸವಾಗಿದ್ದು, ಅವರ ಪುತ್ರ ಪ್ರೀತಂ ಸುವರ್ಣ ವಿದೇಶದಲ್ಲಿ ಕೆಲಸದಲ್ಲಿದ್ದಾರೆ. ಮನೆಯ ಸಿಸಿಟಿವಿ ಕ್ಯಾಮೆರಾ ಮೊಬೈಲ್ ಗೆ ಕನೆಕ್ಟ್ ಮಾಡಿದ್ದರು. ಮೂರು ದಿನಗಳ ಹಿಂದೆ ಉಮಾಶಂಕರಿ ತಂದೆ ಪದ್ಮನಾಭ ಮೇಲೆ ವಾಕಿಂಗ್ ಸ್ಟಿಕ್ ನಿಂದದ ಹಲ್ಲೆ ಮಾಡಿರುವುದನ್ನು ಸಿಸಿ ಟಿವಿ ಕ್ಯಾಮೆರಾದಲ್ಲಿ ವೀಕ್ಷಿಸಿದ ಪ್ರೀತಂ ಮೂಡಬಿದರೆಯಲ್ಲಿರುವ ತನ್ನ ತಂಗಿಗೆ ವಿಷಯ ತಿಳಿಸಿದ್ದಾರೆ.
ಸಿಸಿಟಿವಿ ದಾಖಲೆ ಸಹಿತ ಪೊಲೀಸ್ ದೂರು ನೀಡುವಂತೆ ಹೇಳಿದ್ದು, ಕಂಕನಾಡಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಹಲ್ಲೆಗೊಳಗಾದ ಪದ್ಮನಾಭ ಸುವರ್ಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಉಮಾಶಂಕರಿ ವಿರುದ್ಧ ಕೊಲೆ ಯತ್ನ ಕೇಸ್ ದಾಖಲಿಸಲಾಗಿದ್ದು, ಹಲ್ಲೆಯ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಾರ್ವಜನಿಕರಿಂದ ಭಾರಿ ಆಕ್ರೋಶ ವ್ಯಕ್ತವಾಗಿದೆ.