ಬೆಂಗಳೂರು: ಕಾಳಸಂತೆಯಲ್ಲಿ ರೆಮ್ ಡೆಸಿವಿರ್ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಇಬ್ಬರು ವೈದ್ಯರು ಸೇರಿ ನಾಲ್ವರನ್ನು ಹಲಸೂರು ಗೇಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿತರು ಹಣ ಪಡೆದು ನಕಲಿ ಕೋವಿಡ್ ವರದಿ ವಿತರಿಸುತ್ತಿದ್ದರು ಎನ್ನುವುದು ತನಿಖೆಯಲ್ಲಿ ಗೊತ್ತಾಗಿದೆ.
ಚಾಮರಾಜಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ. ಶೇಖರ್, ಡಾ. ಪ್ರಜ್ವಲಾ, ಮಂಜುನಾಥ ನಗರದ ಕಿಶೋರ್ ಮತ್ತು ಮೋಹನ್ ಬಂಧಿತ ಆರೋಪಿಗಳು ಎಂದು ಹೇಳಲಾಗಿದೆ. 11 ರೆಮ್ ಡೆಸಿವಿರ್ ಚುಚ್ಚುಮದ್ದು ಮತ್ತು ನಕಲಿ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ. ಇನ್ನೂ ಹಲವರು ಅಕ್ರಮದಲ್ಲಿ ಭಾಗಿಯಾಗಿರುವ ಹಿನ್ನೆಲೆಯಲ್ಲಿ ತನಿಖೆ ಮುಂದುವರಿಸಲಾಗಿದೆ.
ಆಸ್ಪತ್ರೆಗೆ ದಾಖಲಾದ ಸೋಂಕಿತರ ಹೆಸರಿನಲ್ಲಿ ರೆಮ್ ಡೆಸಿವಿರ್ ಪಡೆದುಕೊಂಡು ಕಾಳಸಂತೆಯಲ್ಲಿ 25 ಸಾವಿರ ರೂಪಾಯಿಗೆ ಮಾರಾಟ ಮಾಡುತ್ತಿದ್ದರು. ಕೋವಿಡ್ ನೆಗೆಟಿವ್ ನಕಲಿ RTPCR ವರದಿ ನೀಡಲು 500 ರೂಪಾಯಿ ಪಡೆದುಕೊಳ್ಳುತ್ತಿದ್ದರು. ಹೀಗೆ ತಲಾ 500 ರೂಪಾಯಿ ಪಡೆದುಕೊಂಡು 500 ಕ್ಕೂ ಅಧಿಕ ಜನರಿಗೆ ನಕಲಿ ವರದಿ ನೀಡಿದ್ದಾರೆ ಎನ್ನಲಾಗಿದೆ. ಇವರ ಬಗ್ಗೆ ಮಾಹಿತಿ ಪಡೆದ ಎಸಿಪಿ ನಜ್ಮಾ ಫಾರೂಕ್ ನೇತೃತ್ವದ ತಂಡ ಮಾರುವೇಷದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದೆ.