
ಮಂಗಳೂರು: ನೈತಿಕ ಪೊಲೀಸ್ ಗಿರಿ ನಡೆಸಿದ ಇಬ್ಬರನ್ನು ಉಪ್ಪಿನಂಗಡಿ ಠಾಣಾ ಪೊಲೀಸರು ಬಂಧಿಸಿದ್ದಾರೆ ಬಾಲಚಂದ್ರ(35), ರಂಜಿತ್(31) ಬಂಧಿತರು ಎಂದು ಹೇಳಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನ ಗುಂಡ್ಯದಲ್ಲಿ ಆಟೋದಲ್ಲಿ ಹೋಗುತ್ತಿದ್ದ ಅನ್ಯ ಕೋಮಿನ ಜೋಡಿ ತಡೆದು ಹಲ್ಲೆ ನಡೆಸಲಾಗಿತ್ತು. ಪ್ರಿಯತಮೆಯೊಂದಿಗೆ ತೆರಳುವಾಗ ಸಂಘಟನೆಯ ಕಾರ್ಯಕರ್ತರು ಹಲ್ಲೆ ಮಾಡಿರುವುದಾಗಿ ಆಟೋ ಚಾಲಕ ದೂರು ನೀಡಿದ್ದರು. ನೈತಿಕ ಪೊಲೀಸ್ ಗಿರಿ ನಡೆಸಿದ ಆರೋಪದಲ್ಲಿ ಇಬ್ಬರನ್ನು ಬಂಧಿಸಲಾಗಿದೆ. ಉಳಿದವರ ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ.
ಸಂಘಟನೆಯ ಕಾರ್ಯಕರ್ತರನ್ನು ಬಂಧಿಸಿದರೂ ಅವರ ಪರವಾಗಿ ನಿಲ್ಲದ ಶಾಸಕ ಸಂಜೀವ ಮಠಂದೂರು ವಿರುದ್ಧ ಹಿಂದೂ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆನ್ನಲಾಗಿದೆ.
ಗುಂಡ್ಯ ಪ್ರದೇಶದಲ್ಲಿ ಅನ್ಯ ಕೋಮಿನ ಆಟೋ ಚಾಲಕನೊಂದಿಗೆ ವೇಣೂರು ಯುವತಿ ಬಂದಿದ್ದು, ಇವರು ರಸ್ತೆಬದಿ ಆಟೋ ನಿಲ್ಲಿಸಿ ಕಾಡು ದಾರಿಯಲ್ಲಿ ಹೋಗುವಾಗ ತಡೆದ ಕಾರ್ಯಕರ್ತರು ಪೊಲೀಸರಿಗೆ ಒಪ್ಪಿಸಿದ್ದರು. ಈ ಬಗ್ಗೆ ಆಟೋ ಚಾಲಕ ದೂರು ನೀಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ ಎಂದು ಹೇಳಲಾಗಿದೆ.