ಬೆಂಗಳೂರು: ಬೆಂಗಳೂರಿನಲ್ಲಿ ಇಬ್ಬರು ಬಾಲಕಿಯರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಮಲ ತಂದೆ ಸುಮಿತ್ ಮೋಹನ್ ನನ್ನು ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ಅಮೃತಹಳ್ಳಿ ಠಾಣೆ ಪೋಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಬೆಂಗಳೂರು ಬಿಡಲು ರೈಲು ನಿಲ್ದಾಣಕ್ಕೆ ಬಂದಿದ್ದ ಸುಮಿತ್ ಪೊಲೀಸರ ಬಲೆಗೆ ಬಿದ್ದಿದ್ದಾನೆ. ರಾತ್ರಿ ಯಶವಂತಪುರ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ ಸುಮಿತ್ ಟಿಕೆಟ್ ಗಾಗಿ ಮೊಬೈಲ್ ಆನ್ ಮಾಡಿದ್ದ. ಆರೋಪಿ ಸುಮಿತ್ ಕೆಲವೇ ಸೆಕೆಂಡ್ ಆನ್ ಮಾಡಿ ಮೊಬೈಲ್ ಆಫ್ ಮಾಡಿದ್ದ. ಅಷ್ಟೊತ್ತಿಗಾಗಲೇ ಆರೋಪಿಯನ್ನು ಸುತ್ತುವರಿದಿದ್ದ ಅಮೃತಹಳ್ಳಿ ಠಾಣೆ ಪೋಲೀಸರು ಬಂಧಿಸಿದ್ದಾರೆ. ಆತನನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದಾರೆ.
ಡೆಹರಾಡೂನ್ ಮೂಲಕ ಸುಮಿತ್ ಮೋಹನ್, ಪತ್ನಿ ಮತ್ತು ಮಕ್ಕಳ ಮೇಲೆ ಅತಿಯಾದ ಅನುಮಾನ ಹೊಂದಿದ್ದ. ಮಚ್ಚಿನಿಂದ ಹಲ್ಲೆ ನಡೆಸಿ ಮಕ್ಕಳನ್ನು ಕೊಲೆಗೈದು ಪರಾರಿಯಾಗಿದ್ದ. ಉತ್ತರ ಪ್ರದೇಶ ಮೂಲದ ಅನಿತಾ 9 ವರ್ಷಗಳ ಹಿಂದೆ ಆರೋಪಿ ಸುಮಿತ್ ಮೋಹನನ್ನು ಎರಡನೇ ಮದುವೆಯಾಗಿದ್ದರು. ಹೆಬ್ಬಾಳದ ದಾಸರಹಳ್ಳಿ ಸಮೀಪದ ಕಾವೇರಿ ನಗರದಲ್ಲಿ ಕೆಲಸ ನೆಲೆಸಿದ್ದರು. ಖಾಸಗಿ ಕಂಪನಿಯಲ್ಲಿ ಅನಿತಾ ಕೆಲಸ ಮಾಡುತ್ತಿದ್ದು, ಆರೋಪಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ. ಇತ್ತೀಚೆಗೆ ದಂಪತಿ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳವಾಗತ್ತಿತ್ತು. ಶನಿವಾರ ಬೆಳಗ್ಗೆ ಅನಿತಾ ಕೆಲಸಕ್ಕೆ ಹೋಗಿದ್ದಾಗ ಶಾಲೆ ಮುಗಿಸಿ ಮನೆಗೆ ಬಂದಿದ್ದ ಮಕ್ಕಳ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ ಕೊಲೆ ಮಾಡಿ ಸುಮಿತ್ ಪರಾರಿಯಾಗಿದ್ದ.