ಬೆಂಗಳೂರು: ಹಾಡಹಗಲೇ ಅಪಾರ್ಟ್ ಮೆಂಟ್ ಗೆ ನುಗ್ಗಿ ವೃದ್ಧ ದಂಪತಿಯ ಮೇಲೆ ಹಲ್ಲೆ ಮಾಡಿ ಚಿನ್ನಾಭರಣ ದೋಚಿ ಪರಾರಿಯಾಗಲೆತ್ನಿಸಿದ ಆರೋಪಿಯನ್ನು ಸ್ಥಳೀಯರೇ ಹಿಡಿದು ಚೆನ್ನಮ್ಮನ ಕೆರೆ ಅಚ್ಚುಕಟ್ಟು ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ.
ಉತ್ತರಹಳ್ಳಿ ಸಪ್ತಗಿರಿ ಲೇಔಟ್ ವಾಸಿ ಷಣ್ಮುಗಂ(56) ಬಂಧಿತ ಆರೋಪಿಯಾಗಿದ್ದು, ಆತನಿಂದ ಚಿನ್ನದ ಬಳೆ, ಮಾಂಗಲ್ಯಸರ ಸೇರಿದಂತೆ 50 ಗ್ರಾಂ ತೂಕದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ಕತ್ರಿಗುಪ್ಪೆಯ ಕಾವೇರಿ ನಗರದ ಸ್ವಯಂಕೃಷಿ ಅಪಾರ್ಟ್ಮೆಂಟ್ ನಿವಾಸಿಗಳಾದ ವೃದ್ಧ ದಂಪತಿ ಹಲ್ಲೆಗೊಳಗಾದವರು.
ದಂಪತಿಯ ಮಕ್ಕಳು ನೆದರ್ಲ್ಯಾಂಡ್ ನಲ್ಲಿ ಕೆಲಸ ಮಾಡುತ್ತಿದ್ದಾರೆ. ಅಪಾರ್ಟ್ಮೆಂಟ್ನಲ್ಲಿ ಇವರಿಬ್ಬರೇ ಇದ್ದರು. ಕುಟುಂಬಕ್ಕೆ ಪರಿಚಿತನಾಗಿದ್ದ ಷಣ್ಮುಗಂ ವೃದ್ಧ ದಂಪತಿಯನ್ನು ಕೊಲೆ ಮಾಡಿ ಹಣ ಚಿನ್ನಾಭರಣ ದೋಚಲು ಸಂಚು ರೂಪಿಸಿದ್ದ. ಮಾರ್ಚ್ 12 ರಂದು ಮಧ್ಯಾಹ್ನ ಮನೆಗೆ ಬಂದ ಆರೋಪಿ ವೃದ್ಧೆಯ ಮೇಲೆ ಹಲ್ಲೆ ಮಾಡಿ ಮಾಂಗಲ್ಯಸರ, ಚಿನ್ನದ ಬಳೆ ಕಿತ್ತುಕೊಂಡಿದ್ದಾನೆ. ಈ ವೇಳೆ ಮನೆಗೆ ಬಂದ ವೃದ್ಧನ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದು, ಅವರು ಆರೋಪಿಯ ಕೈಹಿಡಿದುಕೊಂಡು ಈ ವೇಳೆ ಆರೋಪಿ ಕೈಯಲ್ಲಿದ್ದ ಡ್ರಾಗರ್ ಆತನಿಗೆ ಚುಚ್ಚಿದೆ.
ಅಕ್ಕಪಕ್ಕದ ಮನೆಯವರು ಗಲಾಟೆ ಕೇಳಿಬಂದಾಗ ಪರಾರಿಯಾಗಲು ಯತ್ನಿಸಿದ್ದು, ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ದಂಪತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.