ಬೆಂಗಳೂರು: ಬೆಂಗಳೂರಿನಲ್ಲಿ ಸೆಂಟ್ರಿಂಗ್ ಪೋಲ್ ಬಿದ್ದು ಬಾಲಕಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕಟ್ಟಡದ ಗುತ್ತಿಗೆದಾರ ಚಂದ್ರಶೇಖರ್ ನನ್ನು ಬಂಧಿಸಿದ್ದಾರೆ.
ವಿವಿ ಪುರಂ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಗುತ್ತಿಗೆದಾರ ಚಂದ್ರಶೇಖರ್ ಬಂಧಿಸಿದ್ದಾರೆ.
ನ್ಯಾಷನಲ್ ಕಾಲೇಜ್ ಮೆಟ್ರೋ ನಿಲ್ದಾಣದ ಬಳಿ ನಿರ್ಮಾಣ ಹಂತದ ಕಟ್ಟಡದಿಂದ ಸೆಂಟ್ರಿಂಗ್ ಪೋಲ್ ಕುಸಿದು ಬಾಲಕಿ ತೇಜಸ್ವಿನಿ(16) ಮೃತಪಟ್ಟಿದ್ದು, ಮೃತ ತೇಜಸ್ವಿನಿ ತಂದೆ ಸುಧಾಕರ್ ರಾವ್ ದೂರು ನೀಡಿದ್ದರು.
ಪುತ್ರಿಯ ಸಾವಿಗೆ ನಿರ್ಲಕ್ಷ್ಯ, ಬೇಜವಾಬ್ದಾರಿತನವೇ ಕಾರಣವೆಂದು ಕಟ್ಟಡದ ಮಾಲೀಕ, ಗುತ್ತಿಗೆದಾರ, ಸೈಟ್ ಇಂಜಿನಿಯರ್, ಸಂಬಂಧಿಸಿದ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಸುಧಾಕರ್ ದೂರು ನೀಡಿದ್ದು, ಎಫ್ಐಆರ್ ದಾಖಲಾಗಿದೆ
ಶಾಲಾ ವಾರ್ಷಿಕೋತ್ಸವ ಮುಗಿಸಿ ತೇಜಸ್ವಿನಿ ಮನೆಗೆ ಹೋಗುವಾಗ ನಿರ್ಮಾಣ ಹಂತದ ಕಟ್ಟಡದಿಂದ ಸೆಂಟ್ರಿಂಗ್ ಪೋಲ್ ಕುಸಿದು ಘಟನೆ ನಡೆದಿತ್ತು. ನಿಮ್ಹಾನ್ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಳು. ಸುರಕ್ಷಿತ ಕ್ರಮ ಕೈಗೊಳ್ಳದೆ ಕಟ್ಟಡ ಕಾಮಗಾರಿ ನಡೆಸುತ್ತಿದ್ದರಿಂದ ಅವಘಡ ಸಂಭವಿಸಿದೆ ಎಂದು ಹೇಳಲಾಗಿದೆ.