ಶ್ರೀನಗರ: ಜಮ್ಮು-ಕಾಶ್ಮೀರದ ಪೂಂಛ್ ನಲ್ಲಿ ಸಂಭವಿಸಿದ ಸೇನಾ ವಾಹನ ಅಪಘಾತ ಪ್ರಕರಣದಲ್ಲಿ ಕರ್ನಾಟಕದ ಮೂವರು ಯೋಧರು ಸೇರಿ ಐವರು ಸಾವನ್ನಪ್ಪಿದ್ದರು. ಇಬ್ಬರು ಯೋಧರು ಗಂಭೀರವಾಗಿ ಗಾಯಗೊಂಡಿದ್ದರು. ಗಾಯಾಳುಗಳ ಪೈಕಿ ಕೊಡಗು ಜಿಲ್ಲೆಯ ಯೋಧನ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.
ಕೊಡಗಿನ ಯೋಧ ದಿವಿನ್ (28) ಅವರ ಸ್ಥಿತಿ ಗಂಭೀರವಾಗಿದ್ದು, ಶ್ರೀನಗರ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಸೇನೆಯಿಂದ ದಿವಿನ್ ತಾಯಿಗೆ ಕರೆ ಬಂದಿದ್ದು, ಕುಟುಂಬದವರು ಕೊಡಗಿನಿಂದ ನಿನ್ನೆಯೇ ಶ್ರೀನಗರಕ್ಕೆ ದೌಡಾಯಿಸಿದ್ದಾರೆ.
ದಿವಿನ್ 10 ವರ್ಷಗಳ ಹಿಂದೆ ಸೇನೆಗೆಸೇರಿದ್ದರು. ಇತ್ತೀಚೆಗೆ ನಿಶ್ಚಿತಾರ್ಥ ಕೂಡ ನೆರವೇರಿತ್ತು. ಇದೇ ಫೆಬ್ರವರಿಯಲ್ಲಿ ವಿವಾಹ ನಿಶ್ಚಯವಾಗಿದೆ. ಈ ನಡುವೆಯೇ ದಿವನ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದು, ಆತಂಕಕ್ಕೆ ಕಾರಣವಾಗಿದೆ.