ಅಕ್ರಮವಾಗಿ ಗಡಿ ದಾಟಿ ಭಾರತ ಪ್ರವೇಶಿಸುವ ವೇಳೆ ಯೋಧರ ಗುಂಡೇಟಿನಿಂದ ಗಾಯಗೊಂಡಿರುವ ಪಾಕ್ ಆಕ್ರಮಿತ ಕಾಶ್ಮೀರದ ಉಗ್ರನಿಗೆ ಭಾರತೀಯ ಯೋಧರು ರಕ್ತದಾನ ಮಾಡಿ ಮಾನವೀಯತೆ ಮೆರೆದಿದ್ದಾರಲ್ಲದೆ ಆತನ ಜೀವ ಉಳಿಯಲು ಕಾರಣರಾಗಿದ್ದಾರೆ.
ಈ ಘಟನೆ ಆಗಸ್ಟ್ 21ರಂದು ನಡೆದಿದ್ದು, ಪಾಕ್ ಆಕ್ರಮಿತ ಕಾಶ್ಮೀರದ ತಬ್ರಾಕ್ ಹುಸೇನ್ ಎಂಬಾತ ಗಡಿಯಲ್ಲಿದ್ದ ತಂತಿ ಬೇಲಿಯನ್ನು ಕತ್ತರಿಸಿ ಒಳಬರಲು ಯತ್ನಿಸಿದ್ದ. ಇದನ್ನು ಗಮನಿಸಿದ್ದ ಭಾರತೀಯ ಯೋಧರು ಗುಂಡು ಹಾರಿಸಿದ್ದು ಈ ವೇಳೆ ಆತ ಗಾಯಗೊಂಡರೆ ಇತರ ಇಬ್ಬರು ಪರಾರಿಯಾಗಿದ್ದರು.
ಘಟನೆ ಕುರಿತಂತೆ ಮಾಹಿತಿ ನೀಡಿರುವ ನೌಶೇರಾ ಬ್ರಿಗೇಡ್ ನ ಬ್ರಿಗೇಡಿಯರ್ ಕಪಿಲ್ ರಾಣಾ, ಉಗ್ರ ತಬ್ರಾಕ್ ಹುಸೇನ್ ನನ್ನು ಆಸ್ಪತ್ರೆಯ ಐಸಿಯು ಗೆ ದಾಖಲಿಸಲಾಗಿದೆ. ಈ ವೇಳೆ ಆತನಿಗೆ ನಮ್ಮ ಯೋಧರು ಮೂರು ಬಾಟಲಿ ರಕ್ತ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಈ ಮೊದಲು 2017ರಲ್ಲೂ ತಬ್ರಾಕ್ ಹುಸೇನ್ ಹಾಗೂ ಆತನ ಅಪ್ರಾಪ್ತ ಸಹೋದರ ಗಡಿ ನುಸುಳಲು ಯತ್ನಿಸಿದ್ದು, ಮಾನವೀಯತೆ ಕಾರಣಕ್ಕೆ ಅವರನ್ನು ಕಳುಹಿಸಿಕೊಡಲಾಗಿತ್ತು ಎನ್ನಲಾಗಿದೆ. ಈ ಬಾರಿ ಪಾಕಿಸ್ತಾನದ ಅಧಿಕಾರಿಯೊಬ್ಬ 30 ಸಾವಿರ ರೂಪಾಯಿ ನೀಡಿ ಭಾರತಕ್ಕೆ ತೆರಳಿ ಉಗ್ರ ಕೃತ್ಯ ನಡೆಸುವಂತೆ ಹೇಳಿದ್ದ ಎನ್ನಲಾಗಿದೆ.