ಬಾಗಲಕೋಟೆ: ಪಂಜಾಬ್ ರಾಜ್ಯದ ಭಟಿಂಡಾದ ಮಿಲಿಟರಿ ಸ್ಟೇಷನ್ ನಲ್ಲಿ ಇಂದು ನಡೆದ ಫೈರಿಂಗ್ ನಲ್ಲಿ ರಾಜ್ಯದ ಯೋಧ ಸಂತೋಷ್ ಮಲ್ಲಪ್ಪ ನಾಗರಾಳ(24) ಹುತಾತ್ಮರಾಗಿದ್ದಾರೆ.
ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಇನಾಮಹನಮನೇರಿ ನಿವಾಸಿಯಾಗಿರುವ ಅವರು ಕಳೆದ ನಾಲ್ಕು ವರ್ಷಗಳಿಂದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಯೋಧ ಸಂತೋಷ ಇಂದು ಮುಂಜಾನೆ ನಡೆದ ಫೈರಿಂಗ್ ನಲ್ಲಿ ಹುತಾತ್ಮರಾಗಿದ್ದಾರೆ ಎನ್ನಲಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ಬುಧವಾರ ಮುಂಜಾನೆ ಪಂಜಾಬ್ ನ ಭಟಿಂಡಾದಲ್ಲಿ ಸೇನಾ ಠಾಣೆಯೊಂದರಲ್ಲಿ ನಡೆದ ಗುಂಡಿನ ದಾಳಿಯಲ್ಲಿ ನಾಲ್ವರು ಸೇನಾ ಯೋಧರು ಹುತಾತ್ಮರಾಗಿದ್ದು, ಇಬ್ಬರು ಅಪರಿಚಿತ ವ್ಯಕ್ತಿಗಳ ವಿರುದ್ಧ ರಾಜ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಫಿರಂಗಿ ಘಟಕದ ಅಧಿಕಾರಿಗಳ ಮೆಸ್ ಬಳಿಯ ಬ್ಯಾರಕ್‌ನಲ್ಲಿ ಮುಂಜಾನೆ 4:30 ರ ಸುಮಾರಿಗೆ ಗುಂಡಿನ ದಾಳಿ ನಡೆದಾಗ ನಾಲ್ವರು ಸಿಬ್ಬಂದಿಗಳು ಮಲಗಿದ್ದರು. ಸಾಗರ್ ಬನ್ನೆ (25) ಮತ್ತು ಯೋಗೇಶ್ ಕುಮಾರ್ ಜೆ(24) ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಇನ್ನೊಂದು ಕೋಣೆಯಲ್ಲಿ ಸಂತೋಷ್ ಎಂ ನಾಗರಾಳ್(24) ಮತ್ತು ಕಮಲೇಶ್ ಆರ್.(24) ಮೃತದೇಹ ಪತ್ತೆಯಾಗಿದೆ.