ಭಾರತೀಯ ಸೇನಾ ಪಡೆಯ ಹೆಮ್ಮೆಯ ಶ್ವಾನ ʼಫ್ಯಾಂಟಮ್ʼ ಭಯೋತ್ಪಾದಕರ ವಿರುದ್ದದ ಕಾರ್ಯಾಚರಣೆ ವೇಳೆ ವೀರ ಮರಣವನ್ನಪ್ಪಿದೆ. ಜಮ್ಮು ಮತ್ತು ಕಾಶ್ಮೀರದ ಅಖ್ನೂರ್‌ನ ಸುಂದರ್‌ಬನಿ ಸೆಕ್ಟರ್‌ನಲ್ಲಿ ಕಾರ್ಯಾಚರಣೆ ನಡೆಸುವಾಗ ಈ ಘಟನೆ ನಡೆದಿದೆ.
ಫ್ಯಾಂಟಮ್, ಭಯೋತ್ಪಾದನಾ-ವಿರೋಧಿ ಕಾರ್ಯಾಚರಣೆಯಲ್ಲಿ ತೊಡಗಿರುವ ಸೇನಾ ಘಟಕದ ಭಾಗವಾಗಿದ್ದು, ಕಾರ್ಯಾಚರಣೆ ವೇಳೆ ಗುಂಡು ತಗುಲಿತ್ತು. ಸೇನೆಯ ಶ್ವಾನವಾದ ʼಫ್ಯಾಂಟಮ್ʼ ಸೇವೆಯ ಸಮಯದಲ್ಲಿಯೇ ತನ್ನ ಪ್ರಾಣವನ್ನು ತ್ಯಾಗ ಮಾಡಿದೆ.
ವೈಟ್ ನೈಟ್ ಕಾರ್ಪ್ಸ್ ಎಂದು ಕರೆಯಲ್ಪಡುವ 16 ಕಾರ್ಪ್ಸ್, ಮೃತಪಟ್ಟ ಶ್ವಾನದ ಗೌರವಾರ್ಥವಾಗಿ “ನಮ್ಮ ನಿಜವಾದ ನಾಯಕ, ವೀರ ಭಾರತೀಯ ಸೇನೆಯ ನಾಯಿ, ಫ್ಯಾಂಟಮ್‌ನ ಅತ್ಯುನ್ನತ ತ್ಯಾಗಕ್ಕೆ ನಾವು ನಮಸ್ಕರಿಸುತ್ತೇವೆ” ಎಂದು ಹೇಳಿದೆ.
ಜಮ್ಮು ಮತ್ತು ಕಾಶ್ಮೀರದ ಅಖ್ನೂರ್‌ನ ಅಸನ್, ಸುಂದರಬಂಡಿ ಸೆಕ್ಟರ್‌ನಲ್ಲಿ ಭಯೋತ್ಪಾದಕರು ಸೇನಾ ವಾಹನವನ್ನು ಗುರಿಯಾಗಿಸಿಕೊಂಡಿದ್ದು, ಭಯೋತ್ಪಾದಕರ ಪತ್ತೆಗೆ ದೊಡ್ಡ ಮಟ್ಟದ ಶೋಧ ಕಾರ್ಯಾಚರಣೆ ಆರಂಭಿಸಲಾಗಿತ್ತು.
ಸರ್ಚ್-ಕಾರ್ಡನ್ ಕಾರ್ಯಾಚರಣೆಯಲ್ಲಿ ಓರ್ವ ಭಯೋತ್ಪಾದಕನನ್ನು ಹತ್ಯೆ ಮಾಡಲಾಗಿದ್ದು, ಗುಂಡಿನ ಚಕಮಕಿಯಲ್ಲಿ ಗಾಯಗೊಂಡಿದ್ದ ಫ್ಯಾಂಟಮ್ ಸಾವಿಗೀಡಾಗಿದೆ.
ಮೇ 25, 2020 ರಂದು ಜನಿಸಿದ್ದ ಫ್ಯಾಂಟಮ್ K9 ಘಟಕದ ಆಕ್ರಮಣಕಾರಿ ಭಾಗವಾಗಿದ್ದು, ಭಯೋತ್ಪಾದನೆ-ವಿರೋಧಿ ಮತ್ತು ಬಂಡಾಯ-ವಿರೋಧಿ ಕಾರ್ಯಾಚರಣೆಗಳಲ್ಲಿ ಭಾಗವಹಿಸಲು ತರಬೇತಿ ಪಡೆದಿತ್ತು. ಮೀರತ್‌ನ ರಿಮೌಂಟ್ ವೆಟರ್ನರಿ ಕಾರ್ಪ್ಸ್‌ನಿಂದ ಫ್ಯಾಂಟಮ್ ನನ್ನು ತರಲಾಗಿದ್ದು, ಆಗಸ್ಟ್ 12, 2022 ರಂದು ಸೇರ್ಪಡೆಯಾಗಿತ್ತು.