ಬೆಂಗಳೂರು: ಅರ್ಕಾವತಿ ಬಡಾವಣೆ ನಿವೇಶನದಾರರಿಗೆ ಹೈಕೋರ್ಟ್ ನಿಂದ ಗುಡ್ ನ್ಯೂಸ್ ಸಿಕ್ಕಿದೆ. ಅರ್ಕಾವತಿ ಬಡಾವಣೆ ಭೂಸ್ವಾಧೀನವನ್ನು ಹೈಕೋರ್ಟ್ ಎತ್ತಿಹಿಡಿದಿದೆ.
ಮೂರು ತಿಂಗಳಲ್ಲಿ ಬಾಕಿ ನಿವೇಶನ ಹಂಚಿಕೆ ಮಾಡುವಂತೆ ಆದೇಶ ಹೊರಡಿಸಿದೆ. 16 ಹಳ್ಳಿಗಳ ಭೂಸ್ವಾಧೀನ ಪ್ರಶ್ನಿಸಿದ್ದ ಅರ್ಜಿಗಳನ್ನು ಇತ್ಯರ್ಥಪಡಿಸಲಾಗಿದೆ. ನ್ಯಾ. ಅರವಿಂದ್ ಕುಮಾರ್ ಅವರಿದ್ದ ಏಕಸದಸ್ಯ ಪೀಠ ಈ ಕುರಿತಾಗಿ ತೀರ್ಪು ನೀಡಿದೆ.
ರಿಡೂ, ಡಿನೋಟಿಫಿಕೇಶನ್ ಪರಿಶೀಲನೆಗೆ ಸಮಿತಿ ರಚಿಸಿ ಹೂಕೋರ್ಟ್ ಮತ್ತು ಸುಪ್ರೀಂಕೋರ್ಟ್ ತೀರ್ಪಿಗೆ ಬದ್ಧವಾಗಿದೆಯೇ ಎಂಬುದರ ಪರಿಶೀಲನೆ ನಡೆಸಲಾಗುವುದು. ನಿವೃತ್ತ ನ್ಯಾ. ಕೆ.ಎನ್. ಕೇಶವನಾರಾಯಣ, ನಿವೃತ್ತ ಐಎಎಸ್ ಅಧಿಕಾರಿ ಸಂದೀಪ್ ದುಬೆ, ನಿವೃತ್ತ ಪೊಲೀಸ್ ಅಧಿಕಾರಿ ಎನ್.ಎಸ್. ಮೇಘರಿಕ್ ಅವರ ತ್ರಿಸದಸ್ಯ ಸಮಿತಿ 16 ಹಳ್ಳಿಗಳ ಭೂಸ್ವಾಧೀನ ಪರಿಶೀಲನೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ.
ಹಂಚಿಕೆಯಾದ ಜನರಿಗೆ ನಿವೇಶನ ಒದಗಿಸಬೇಕು. ಹಂಚಿಕೆಯಾದವರಿಗೆ ಮಾರಾಟ ಒಪ್ಪಂದ ಮಾಡಿಕೊಡಬೇಕು. 2003ರ ಫೆಬ್ರವರಿ 3 ಕ್ಕಿಂತ ಮೊದಲಿರುವ ಮನೆಗಳು ಉಳಿಯಲಿವೆ. ಪಕ್ಕಾ ಕಟ್ಟಡಗಳಾಗಿದ್ದಲ್ಲಿ ಮಾತ್ರ ಉಳಿಯಲಿವೆ. ಸಿಮೆಂಟ್ ಶೀಟ್ ಮತ್ತು ಹೆಂಚಿನ ಛಾವಣಿ ಪಕ್ಕಾ ಕಟ್ಟಡಗಳಲ್ಲ. ಈ ಬಗ್ಗೆಯೂ ಬಿಡಿಎಗೆ ವರದಿಯನ್ನು ಸಮಿತಿ ನೀಡಲಿದೆ. ವರದಿಯಂತೆ ಕ್ರಮಕೈಗೊಳ್ಳಲು ಬಿಡಿಎಗೆ ನಿರ್ದೇಶನ ನೀಡಲಾಗುವುದು ಎನ್ನಲಾಗಿದೆ.